ನ್ಯೂಸ್

ರಾಹುಲ್ ಗಾಂಧಿ ಹೇಳಿಕೆ ತಿರುಚಿದ ಆರೋಪ; ಯುಟ್ಯೂಬರ್ ವಿರುದ್ಧ ಎಫ್ ಐಆರ್

ಬೆಂಗಳೂರು: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ವಿವಾದಾದ್ಮಕ ವಿಡಿಯೊ ಹರಿಬಿಟ್ಟ ಆರೋಪದ ಮೇಲೆ ಯುಟ್ಯೂಬರ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ವಕೀಲ ಬಿ.ಕೆ. ಬೋಪಣ್ಣ ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಯುಟ್ಯೂಬರ್ ಅಜಿತ್ ಭಾರತಿ ಎಂಬಾತನ ವಿರುದ್ಧ ಕೇಸ್ ದಾಖಲಿಸಿದ್ದು, ಬಂಧನಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಮಮಂದಿರ ಜಾಗದಲ್ಲಿ ಬಾಬರಿ ಮಸೀದಿ ಮರು ನಿರ್ಮಾಣ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಯುಟ್ಯೂಬರ್ ಹೇಳಿದ್ದಾರೆ. ಆದರೆ, ರಾಹುಲ್ ಗಾಂಧಿ ಆ ರೀತಿ ಯಾವುದೇ ಭಾಷಣದಲ್ಲಿ ಹೇಳಿಲ್ಲ. ಜನರಲ್ಲಿ ವಿಭಜನೆಯ ಭಾವ ಉಂಟು ಮಾಡಲು ಹಾಗೂ ಕೋಮು ದ್ವೇಷ ಹರಡಲು ಅಜಿತ್ ಭಾರತಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಯುಟ್ಯೂಬರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಜಿತ್ ಭಾರತಿ ಯೂಟ್ಯೂಬ್ ಚಾನೆಲ್‌ಗೆ 5.56 ಲಕ್ಷ ಚಂದಾದಾರರು ಇದ್ದಾರೆ. ಇತ್ತೀಚಿನ ಹೆಚ್ಚಿನ ವಿಡಿಯೋಗಳು 2 ಲಕ್ಷಕ್ಕೂ ಹೆಚ್ಚು ವೀವ್ಸ್ ಕಂಡಿವೆ. ಸೋಷಿಯಲ್ ಮೀಡಿಯಾ ಪ್ರೊಫೈಲ್‌ನಲ್ಲಿ ಪತ್ರಕರ್ತ ಮತ್ತು ಲೇಖಕ ಎಂದು ಬರೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಅವರ ಬಗ್ಗೆ ಮಾಡಿರುವ ವಿಡಿಯೊ ಸಂಬಂಧ ಇದೀಗ ಪ್ರಕರಣ ದಾಖಲಾಗಿದೆ.