ಬೆಂಗಳೂರು: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂ. ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮತ್ತೊಬ್ಬ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದಿತ್ತು.
ವೈದ್ಯಕೀಯ ಪರೀಕ್ಷೆ ಸಲುವಾಗಿ ಸಿಸಿಬಿ ಪೊಲೀಸರು ಅವರನ್ನು ಅಲ್ಲಿಗೆ ಕರೆದೊಯ್ದಿದ್ದು, ಮುಂದೇನು ಎನ್ನುವ ಕುರಿತು ಒಂದಷ್ಟು ಮಾಹಿತಿ ಹೊರಬಿದ್ದಿದೆ. ವೈದ್ಯಕೀಯ ಪರೀಕ್ಷೆ ಬಳಿಕ ಜಡ್ಜ್ ಮುಂದೆ ಹಾಜರುಪಡಿಸಲು ಸಿಸಿಬಿ ಮುಂದಾಗಿದ್ದು, ನಂತರ 14 ದಿನಗಳ ಕಾಲ ಕಸ್ಟಡಿಗೆ ಕೊಡುವಂತೆ ಕೇಳಲು ಯೋಜನೆ ಹಾಕಿಕೊಂಡಿದೆ.
ಪ್ರಕರಣದಲ್ಲಿ ಮೂರನೇ ಪ್ರಮುಖ ಆರೋಪಿ (A3) ಆಗಿರುವ ಸ್ವಾಮೀಜಿಯನ್ನು ಈ ಮಧ್ಯೆ ಮಡಿವಾಳದಲ್ಲಿನ ಟೆಕ್ನಿಕಲ್ ಸೆಲ್ಗೆ ಕರೆದೊಯ್ದಿರೋ ಸಿಸಿಬಿ, ಅಲ್ಲಿ ಪ್ರಾಥಮಿಕ ಹಂತದ ತನಿಖೆ ನಡೆಸುತ್ತಿದೆ. ಈ ಮೂಲಕ ಪೊಲೀಸ್ ಕಸ್ಟಡಿಗೆ ಕೊಡುವಂತೆ ನ್ಯಾಯಾಧೀಶರ ಮುಂದೆ ಕೋರಿಕೆ ಸಲ್ಲಿಸಲು ಸಿಸಿಬಿ ಸಜ್ಜಾಗುತ್ತಿದೆ.
ಈ ಪ್ರಕರಣದಲ್ಲಿ ಚೈತ್ರಾ ಬಳಿಕ ಜಾಸ್ತಿ ಸದ್ದು ಮಾಡಿದ್ದ ಮತ್ತೊಬ್ಬ ಆರೋಪಿ ಈ ಸ್ವಾಮೀಜಿ. ಇವರ ಕಾರು ಮೈಸೂರಿನಲ್ಲಿ ಪತ್ತೆಯಾಗಿದ್ದು, ಮೈಸೂರಿನಲ್ಲಿ ಹಣ ಇರಿಸಿರುವ ಸುಳಿವು ಕೂಡ ಸಿಕ್ಕಿದೆ. ನ್ಯಾಯಾಧೀಶರ ಲಭ್ಯತೆ ನೋಡಿಕೊಂಡು ಅವರ ಮುಂದೆ ಸ್ವಾಮೀಜಿಯನ್ನು ಸಿಸಿಬಿ ಹಾಜರುಪಡಿಸಲಿದೆ.