ನ್ಯೂಸ್

ಪ್ರತಿಷ್ಠಿತ ಕಾಲೇಜಿನ ಬಳಿ ಹಾಡಹಗಲೇ ಮಾದಕ ವಸ್ತು ಮಾರುತ್ತಿದ್ದ ಆರೋಪಿಗಳ ಬಂಧನ

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸಿ ಬರೋಬ್ಬರಿ 15 ಲಕ್ಷ ಮೌಲ್ಯದ 25 ಕೆಜಿ ಗಾಂಜಾವನ್ನ ವಶ ಪಡಿಸಿಕೊಳ್ಳುವಲ್ಲಿ ಆನೇಕಲ್ ಪೋಲೀಸರು ಯಶಸ್ವಿಯಾಗಿದ್ದಾರೆ.

ಆನೇಕಲ್ ಪಟ್ಟಣದ ಸೋಮಶೇಖರ್ ಹಾಗೂ ರಾಘವೇಂದ್ರ ಬಂಧಿತ ಆರೋಪಿಗಳಾಗಿದ್ದಾರೆ. ಈ ಇಬ್ಬರು ಅಸಾಮಿಗಳು ಬೇಗನೆ ಹಣ ಸಂಪಾದನೆ ಮಾಡಬೇಕೆನ್ನುವ ದುರುದ್ದೇಶದಿಂದ ರಾಜ್ಯ ಹಾಗೂ ಹೊರರಾಜ್ಯಗಳಿಂದ ಗಾಂಜಾವನ್ನ ತಂದು ಸಣ್ಣ ಸಣ್ಣ ಪ್ಯಾಕೆಟ್ ಗಳನ್ನಾಗಿ ಮಾಡಿ ಆನೇಕಲ್ ಪಟ್ಟಣಕ್ಕೆ ಸಮೀಪವಿರುವ ಪ್ರತಿಷ್ಠಿತ ಅಲಯನ್ಸ್ ಕಾಲೇಜಿನ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಪೊಲೀಸರು ವಶಪಡಿಸಿಕೊಂಡಿರುವ ಗಾಂಜಾ

ಕಾಲೇಜು ವಿಧ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದ ಆನೇಕಲ್ ಪೋಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆನೇಕಲ್ ಪಟ್ಟಣದ ಅಯೋಧ್ಯೆ ನಗರದ ಮನೆಯೊಂದರಲ್ಲಿ ಗಾಂಜಾ ಸಂಗ್ರಹ ಮಾಡಿರುವುದು ತಿಳಿಯುತ್ತಿದ್ದಂತೆ ಆನೇಕಲ್ ತಹಶೀಲ್ದಾರ್ ಶಿವಪ್ಪ ಲಮಾಣಿ ನೇತೃತ್ವದಲ್ಲಿ ಪೋಲೀಸರು ಮನೆ ಪರಿಶೀಲನೆ ನಡೆಸಿದ ವೇಳೆ 15 ಲಕ್ಷ ಮೌಲ್ಯದ 25 ಕೆಜಿ ಗಾಂಜಾ ಪತ್ತೆಯಾಗಿದೆ. ಗಾಂಜಾ ವಶಕ್ಕೆ ಪಡೆದ ಆರೋಪಿಗಳ ವಿರುದ್ಧ ಆನೇಕಲ್ ಪೊಲೀಸರು ಎನ್ ಡಿ ಪಿ ಎಸ್ ಅ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ.