PM Modi Mother: ಬಿಹಾರದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಆರ್‌ಜೆಡಿಯ ಬಿಹಾರ ಅಧಿಕಾರ ಯಾತ್ರೆಯಲ್ಲಿ ಮತ್ತೊಮ್ಮೆ ಪ್ರಧಾನಿ ಮೋದಿ ಅವರ ತಾಯಿಯನ್ನು ಆರ್‌ಜೆಡಿ ಕಾರ್ಯಕರ್ತರು ಅವಮಾನಕಾರವಾಗಿ ನಿಂದನೆ ಮಾಡಿದ್ದಾರೆ ಎಂದು ಬಿಹಾರ ಬಿಜೆಪಿ ರಾಜ್ಯ ಘಟಕ ಆರೋಪಿಸಿ ವಿಡಿಯೋವೊಂದನ್ನು ಭಾನುವಾರ (ಸೆ.21) ಟ್ವೀಟ್ ಮಾಡಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಬಿಹಾರ ಡಿಸಿಎಂ ಸಾಮ್ರಾಟ್ ಚೌಧರಿ, ತೇಜಸ್ವಿ ಯಾದವ್ ಮತ್ತೊಮ್ಮೆ ಮೋದಿಯವರ ದಿವಂಗತ ತಾಯಿಯನ್ನು ಅವಮಾನಿಸಿದ್ದಾರೆ. ಬಿಹಾರದ ಸಂಸ್ಕೃತಿಯನ್ನು ಹಾಳು ಮಾಡಿದ್ದಾರೆ. ರ್ಯಾಲಿಯಲ್ಲಿ ಆರ್‌ಜೆಡಿ ಕಾರ್ಯಕರ್ತರು ನಿಂದನೆಗಳನ್ನು ಮಾಡುತ್ತಿದ್ದರು. ತೇಜಸ್ವಿ ಯಾದವ್ ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಬಿಹಾರದ ತಾಯಂದಿರು ಮತ್ತು ಸಹೋದರಿಯರು ಈ ಗೂಂಡಾ ಮನಸ್ಥಿತಿ ಮತ್ತು ನಿಂದನೀಯ ನಡವಳಿಕೆಗೆ ಖಂಡಿತವಾಗಿಯೂ ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಹೇಳಿದ್ದಾರೆ.
ಇನ್ನೂ ಬಿಜೆಪಿ ಆರೋಪಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಆರ್‌ಜೆಡಿ ವಕ್ತಾರ ಚಿತ್ರಂಜನ್ ಗಗನ್, ತೇಜಸ್ವಿಯವರ 'ಬಿಹಾರ ಅಧಿಕಾರ ಯಾತ್ರೆ'ಗೆ ಸಿಕ್ಕಿರುವ ಅಭೂತಪೂರ್ವ ಬೆಂಬಲದಿಂದ ಬಿಜೆಪಿ ಆಘಾತಗೊಂಡಿದೆ. ಯಾತ್ರೆಯ ಸಮಯದಲ್ಲಿ ಎತ್ತುತ್ತಿರುವ ವಿಷಯಗಳ ಬಗ್ಗೆ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಯಾವುದೇ ಪ್ರತಿಕ್ರಿಯೆ ನೀಡುವ ಸ್ಥಿತಿಯಲ್ಲಿಲ್ಲ. ಆದ್ದರಿಂದ ಗಮನವನ್ನು ಬೇರೆಡೆ ಸೆಳೆಯಲು ಪಿತೂರಿಯನ್ನು ರೂಪಿಸುತ್ತಿದೆ. ಬಿಹಾರದ ಜನರು ಇದನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಆರ್‌ಜೆಡಿಯ ಸಂಸ್ಕೃತಿ ಯಾರ ವಿರುದ್ಧವೂ ನಿಂದನೀಯ ಭಾಷೆಯನ್ನು ಬಳಸುವಂತಿಲ್ಲ. ಬಿಜೆಪಿ ತೋರಿಸುತ್ತಿರುವ ವೀಡಿಯೊದ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ. ಏಕೆಂದರೆ ಬಿಜೆಪಿಯ ರಾಜಕೀಯ ಅಡಿಪಾಯ ಸುಳ್ಳು ಮತ್ತು ಕುತಂತ್ರದ ಮೇಲೆ ನಿಂತಿದೆ. ಯಾರಾದರೂ ಪ್ರಧಾನಿಯ ವಿರುದ್ಧ ನಿಂದನೀಯ ಭಾಷೆಯನ್ನು ಬಳಸಿದ್ದರೆ, ನಾವು ಅದನ್ನು ಬಲವಾಗಿ ಖಂಡಿಸುತ್ತೇವೆ. ತನಿಖೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ" ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮತದಾರ ಅಧಿಕಾರ ಯಾತ್ರೆಯ ಸಂದರ್ಭದಲ್ಲೂ ದರ್ಭಾಂಗಾದಲ್ಲಿ ವ್ಯಕ್ತಿಯೊಬ್ಬ ಪ್ರಧಾನಿ ತಾಯಿಯನ್ನು ನಿಂದಿಸಿದ್ದ. ಬಳಿಕ ಅವನನ್ನು ಬಂಧಿಸಿ ಪೊಲೀಸರು ಕ್ರಮಕೈಗೊಂಡಿದ್ದರು. ಅದಾದ ಬಳಿಕ ಬಿಹಾರ ಕಾಂಗ್ರೆಸ್, ಪ್ರಧಾನಿಯವರು ತಮ್ಮ ತಾಯಿಯನ್ನು ಕನಸು ಕಾಣುತ್ತಿರುವುದನ್ನು ತೋರಿಸುವ AI-ಚಾಲಿತ ಕ್ಲಿಪ್ ಅನ್ನು ಹಂಚಿಕೊಂಡಿತ್ತು. ಪಾಟ್ನಾ ಕೋರ್ಟ್ ಸಾಮಾಜಿಕ ಜಾಲತಾಣದಿಂದ ಅಳಿಸುವಂತೆ ಸೂಚಿಸಿತು. (ಏಜೆನ್ಸೀಸ್)