ನ್ಯೂಸ್

ಕರೊನಾ ಪರೀಕ್ಷೆ : ಬೋಗಸ್​ ವರದಿ ನೀಡುತ್ತಿದ್ದ ಲ್ಯಾಬ್​ಗಳ ಮಾನ್ಯತೆ ರದ್ದು

ಮುಂಬೈ: ಕರೊನಾ ಸೋಂಕಿನ ಪರೀಕ್ಷೆಗಳಿಗೆ ಬೋಗಸ್ ವರದಿಗಳನ್ನು ನೀಡುತ್ತಿದ್ದ 11 ಖಾಸಗಿ ಲ್ಯಾಬೋರೇಟರಿಗಳ ಅಕ್ರೆಡಿಟೇಷನ್ಅನ್ನು ಮಹಾರಾಷ್ಟ್ರದ ಅಮರಾವತಿ ಜಿಲ್ಲಾಧಿಕಾರಿಗಳು ರದ್ದು ಮಾಡಿದ್ದಾರೆ. ಕರೊನಾ ರಾಪಿಡ್ ಆಂಟಿಜೆನ್ ಟೆಸ್ಟ್​ ನಡೆಸುತ್ತಿದ್ದ ಈ ಲ್ಯಾಬ್​ಗಳು ಹಲವು ನಕಲಿ ವರದಿಗಳನ್ನು ನೀಡಿದ್ದಲ್ಲದೆ ಐಸಿಎಂಆರ್​ ಪೋರ್ಟಲ್​ಗೆ ಸಮಯಕ್ಕೆ ಸರಿಯಾಗಿ ವರದಿ ನೀಡುತ್ತಿರಲಿಲ್ಲ ಎನ್ನಲಾಗಿದೆ.

ಬೋಗಸ್​​ ಪರೀಕ್ಷೆಗಳನ್ನು ನಡೆಸುತ್ತಿರುವ ಬಗ್ಗೆ ಮತ್ತು ಇಂಡಿಯನ್ ಕೌನ್ಸಿಲ್ ಆಫ್​ ಮೆಡಿಕಲ್ ರಿಸರ್ಚ್​(ಐಸಿಎಂಆರ್) ಮಾರ್ಗಸೂಚಿಗಳನ್ನು ಪಾಲಿಸದಿರುವ ಬಗ್ಗೆ ಅಮರಾವತಿ ಜಿಲ್ಲೆಯ ಕೆಲವು ಖಾಸಗಿ ಲ್ಯಾಬ್​ಗಳ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿರುವ ಜಿಲ್ಲಾಡಳಿತ 11 ಲ್ಯಾಬ್​ಗಳಿಗೆ ನೀಡಲಾದ ಮಾನ್ಯತೆಯನ್ನು ವಾಪಸ್​ ಪಡೆದಿದೆ ಎನ್ನಲಾಗಿದೆ.

ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ಟೋಪೆ ಅವರು, ಅಕೋಲಾ, ಅಮರಾವತಿ ಮತ್ತು ವಾಶಿಮ್​ ಜಿಲ್ಲೆಗಳಲ್ಲಿ ನಡೆದಿರುವ ಆರ್​ಟಿಪಿಸಿಆರ್​ ಪರೀಕ್ಷೆಗಳ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ರಾಪಿಡ್​ ಆಂಟಿಜನ್ ಟೆಸ್ಟ್​ ಶೇ. 30-35 ನಿಖರವಾದ ಡಯಾಗ್ನಸಿಸ್​ ಮಾಡಿದರೆ, ಆರ್​ಟಿಪಿಸಿಆರ್​ ಪರೀಕ್ಷೆಗಳು ಶೇ.60-65 ರಷ್ಟು ನಿಖರ ಮಾಹಿತಿಯನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ