ನ್ಯೂಸ್

ಚುನಾವಣೋತ್ತರ ಸಮೀಕ್ಷೆ ಪ್ರಕಾರ ಅಣ್ಣಾಮಲೈಗೆ ಸೋಲು!

ಚೆನ್ನೈ: ಲೋಕಸಭಾ ಚುನಾವಣೆಗೆ 7ನೇಹಂತದ ಮತದಾನ ಮುಗಿಯುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದು, ಇದರ ಪ್ರಕಾರ ಕೊಯಮತ್ತೂರು ಕ್ಷೇತ್ರದಲ್ಲಿ ಅಣ್ಣಾಮಲೈಗೆ ಸೋಲಾಗಲಿದೆ ಎಂದು ಹೇಳಲಾಗುತ್ತಿದೆ.

ಎಲ್ಲ ಸಮೀಕ್ಷೆಗಳೂ ಈ ಬಾರಿ ಬಿಜೆಪಿ ತಮಿಳುನಾಡಿನಲ್ಲಿ ಮತಗಳಿಕೆ ಪ್ರಮಾಣ ಡಬಲ್​ಡಿಜಿಟ್​ಗೆ ಏರಿಕೆಯಾಗಲಿದೆ ಎನ್ನುತ್ತಿವೆ. ಇದರ ಕ್ರೆಡಿಟ್​ ಆ ರಾಜ್ಯದಲ್ಲಿ ಬಿಜೆಪಿ ಮುನ್ನಡೆಸುತ್ತಿರುವ ಅಣ್ಣಾಮಲೈಗೆ ಸಲ್ಲಬೇಕೆಂದರೆ ತಪ್ಪಾಗಲಾರದು. ಆದರೆ ಇದೇ ಅಣ್ಣಾಮಲೈ ಸ್ಪರ್ಧಿಸಿರುವ ಕೊಯಮತ್ತೂರಿನಲ್ಲಿ ಅವರು ಸೋಲುತ್ತಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಪ್ರಸ್ತುತ ಕೊಯಂಬತ್ತೂರಿನಲ್ಲಿ ಅಣ್ಣಾಮಲೈ ವಿರುದ್ಧ ಡಿಎಂಕೆ ಅಭ್ಯರ್ಥಿಯಾಗಿ ಪಿ.ಗಣಪತಿ ರಾಜ್‌ಕುಮಾರ್ ಮತ್ತು ಎಐಎಡಿಎಂಕೆ ನ ಸಿಂಗೈ ಜಿ.ರಾಮಚಂದ್ರನ್ ಕಣಕ್ಕಿಳಿದಿದ್ದಾರೆ. ಈ ಮೂಲಕ ಈ ಬಾರಿಯ ಚುನಾವಣೆಯು ಬಲಿಷ್ಠರ ಕಾಳಗಕ್ಕೆ ಸಾಕ್ಷಿಯಾಗಿದೆ.

ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ, ಪ್ರತಿಪಕ್ಷಗಳ ನೇತೃತ್ವದ INDIA ಕೂಟದ ಡಿಎಂಕೆ ಅಭ್ಯರ್ಥಿ ಪಿ ಗಣಪತಿ ರಾಜ್‌ಕುಮಾರ್ ಭಾರೀ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದೆ.

ಆದರೆ, ಎಕ್ಸಿಟ್ ಪೋಲ್ ಫಲಿತಾಂಶವನ್ನು ತಳ್ಳಿಹಾಕಿರುವ ಅಣ್ಣಾಮಲೈ , ಜೂನ್ 4 ರಂದು ನಾವು ಆರಾಮವಾಗಿ ಗೆಲ್ಲುತ್ತೇವೆ. ಮೋದಿ ಜಿ ದೊಡ್ಡ ಜನಾದೇಶದೊಂದಿಗೆ ಹಿಂತಿರುಗುತ್ತಾರೆ ಎಂದು ತಿಳಿಸಿದ್ದಾರೆ.

ಇನ್ನು ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎಗೆ ದೇಶದಲ್ಲಿ ಬಹುಮತ ಬರಲಿದೆ. ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರಯಲಿದೆ ಎಂದು ಬಹುತೇಕ ಎಲ್ಲ ಸಮೀಕ್ಷೆಗಳು ತಿಳಿಸಿವೆ.