ಶಿವಮೊಗ್ಗ: ನಗರದ ಗಾಂಧಿ ಬಜಾರ್‌ನಲ್ಲಿರುವ ಚೋರ್ ಬಜಾರ್‌ನಲ್ಲಿ ಸೋಮವಾರ ರಾತ್ರಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಎರಡು ಬಟ್ಟೆ ಅಂಗಡಿ, ನಾಲ್ಕು ನಾವೆಲ್ಟೀಸ್ ಹಾಗೂ ಒಂದು ಚಪ್ಪಲಿ ಅಂಗಡಿ ಸಂಪೂರ್ಣ ಸುಟ್ಟು ಹೋಗಿವೆ. ಅಗ್ನಿಶಾಮಕದಳ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
ರಾತ್ರಿ ಎಲ್ಲ ವ್ಯಾಪಾರಿಗಳೂ ಮನೆಗೆ ತೆರಳಿದ ಬಳಿಕ ಅಗ್ನಿ ಅವಘಡ ಸಂಭವಿಸಿದೆ. ಸ್ಥಳದಲ್ಲಿ ದಟ್ಟ ಹೊಗೆ ತುಂಬಿಕೊಂಡ ಕಾರಣ ಅಕ್ಕಪಕ್ಕದ ಬೀದಿಯ ನಿವಾಸಿಗಳು ಎಚ್ಚೆತ್ತುಕೊಂಡು ಅಗ್ನಿಶಾಮಕದಳಕ್ಕೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕೆಲ ಸಮಯದ ಕಾರ್ಯಾಚರಣೆ ಬಳಿಕ ಅಗ್ನಿಶಮನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಘಟನೆ ಸಂಭವಿಸಿರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಪಾಲಿಕೆ ಆಯುಕ್ತೆ ಡಾ.ಕವಿತಾ ಯೋಗಪ್ಪನವರ್ ಭೇಟಿ ನೀಡಿ ಪರಿಶೀಲಿಸಿದರು. ನಷ್ಟ ಅನುಭವಿಸಿದ ವ್ಯಾಪಾರಿಗಳಿಗೆ ಪರಿಹಾರ ನೀಡುವ ಸಂಬಂಧ ಪರಿಶೀಲಿಸುವಂತೆ ಚನ್ನಬಸಪ್ಪ ಆಯುಕ್ತರಿಗೆ ಸೂಚನೆ ನೀಡಿದರು.
ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್.ಎನ್.ಚನ್ನಬಸಪ್ಪ, ಚೋರ್ ಬಜಾರ್‌ನಲ್ಲಿ ಹಲವಾರು ಅಂಗಡಿಗಳಿವೆ. ಇಲ್ಲಿನ ಜಾಗ ಅತ್ಯಂತ ಕಿರಿದಾಗಿದೆ. ಇಂತಹ ಅವಘಡ ಸಂಭವಿಸಿದಲ್ಲಿ ಅದನ್ನು ನಿಯಂತ್ರಿಸುವುದು ತೀರಾ ಕಷ್ಟ ಎನ್ನುವ ಸನ್ನಿವೇಶವಿದೆ. ಅಗ್ನಿಶಾಮಕ ವಾಹನ ಬಜಾರ್‌ನೊಳಗೆ ಹೋಗುವುದಕ್ಕೂ ಆಸ್ಪದವಿಲ್ಲ. ಈ ಹಿನ್ನೆಲೆಯಲ್ಲಿ ಚೋರ್ ಬಜಾರ್ ಸ್ಥಳಾಂತರ ಮಾಡುವ ಬಗ್ಗೆ ಗಂಭೀರ ಚಿಂತನೆ ಮಾಡಬೇಕಿದೆ ಎಂದರು.
ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಬಳಿಕ ಅಧಿಕಾರಿಗಳನ್ನು ಫೋನ್ ಮೂಲಕ ಸಂಪರ್ಕಿಸಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಇಲ್ಲಿನ ವ್ಯಾಪಾರಿಗಳು ಬಡವರು. ಅವರಿಗೆ ನೇರವಾಗಿ ಪರಿಹಾರ ಸಿಗುವಂತೆ ನೋಡಿಕೊಳ್ಳಿ. ಎಷ್ಟು ನಷ್ಟವಾಗಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳವಂತೆ ತಿಳಿಸಿದರು.