ಲಖನೌ: ಉತ್ತರಾಖಂಡದ ಗೌರಿಕುಂಡ್-ಕೇದಾರನಾಥ ಕಾಲ್ನಡಿಗೆ ಮಾರ್ಗದಲ್ಲಿ ಭಾನುವಾರ(ಜು.21) ಬೆಳಗ್ಗೆ ದುರಂತ ಸಂಭವಿಸಿದೆ. ಚಿರಬಸ ಸಮೀಪದ ಬೆಟ್ಟದಿಂದ ಭಾರಿ ಪ್ರಮಾಣದ ಕಲ್ಲುಮಣ್ಣುಗಳು ಮತ್ತು ಬಂಡೆಗಳು ಇದ್ದಕ್ಕಿದ್ದಂತೆ ಕುಸಿದು ಬಿದ್ದ ಪರಿಣಾಮ ಮೂವರು ಭಕ್ತರು ಮೃತಪಟ್ಟಿದ್ದಾರೆ. ಎಂಟು ಮಂದಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಯಿಂದ ಜಾಹ್ನವಿಕಪೂರ್ ಡಿಸ್ಚಾರ್ಜ್
ಉತ್ತರಾಖಂಡದಲ್ಲಿ ಭಾರಿ ಮಳಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದರೂ ಭಕ್ತರು ಕಾಲ್ನಡಿಗೆಯಲ್ಲಿ ತೆರಳಿದ್ದರು. ಭಾನುವಾರ ಬೆಳಗ್ಗೆ 7:30ರ ಸುಮಾರಿಗೆ ಇದ್ದಕ್ಕಿದ್ದಂತೆ ಮಣ್ಣು, ಕಲ್ಲುಬಂಡೆಗಳು ಉರುಳಿಬಿದ್ದ ಪರಿಣಾಮ ದುರ್ಘಟನೆ ಸಂಭವಿಸಿದೆ. ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜವರ್ ತಿಳಿಸಿದ್ದಾರೆ.
ಘಟನೆ ನಡೆದ ತಕ್ಷಣ ಎನ್‌ಡಿಆರ್‌ಎಫ್, ಡಿಡಿಆರ್‌ಎಫ್, ವೈಎಂಎಫ್ ಮತ್ತು ಅಧಿಕಾರಿಗಳನ್ನೊಳಗೊಂಡ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ತಿಳಿದುಬಂದಿದೆ.
ರಕ್ಷಣಾ ತಂಡಗಳು ಮಣ್ಣು, ಕಲ್ಲಿನ ಅವಶೇಷಗಳಿಂದ ಮೂವರ ಮೃತದೇಹಗಳನ್ನು ಹೊರತೆಗೆದಿದ್ದು, ಗಾಯಗೊಂಡವರನ್ನು ರಕ್ಷಿಸಲಾಗಿದೆ.
ಕಳೆದ ಆಗಸ್ಟ್ ನಲ್ಲಿ ಗೌರಿಕುಂಡದಲ್ಲಿ ಗುಡ್ಡ ಕುಸಿದ ಪರಿಣಾಮ ಮೂರು ಅಂಗಡಿಗಳು ನೆಲಸಮವಾಗಿ ಹಲವರು ಮೃತಪಟ್ಟಿದ್ದರು.