ನ್ಯೂಸ್

ಸೋಲೊಪ್ಪುವುದು ಕಷ್ಟ ಎಂದ ಟ್ರಂಪ್

ವಾಷಿಂಗ್ಟನ್: ಜೋ ಬೈಡೆನ್ ವಿಜಯಿಯಾಗಿದ್ದಾರೆಂದು ಚುನಾಯಿತರಾದ ಎಲೆಕ್ಟೋರಲ್ ಕಾಲೇಜ್​ಗಳು ಘೋಷಿಸಿದರೆ ತಾವು ಶ್ವೇತಭವನದಿಂದ ಹೊರ ನಡೆಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ಅಧ್ಯಕ್ಷೀಯ ಚುನಾವಣೆಯನ್ನು ಒಪು್ಪವುದಿಲ್ಲ ಎಂಬ ಹಟಮಾರಿ ಧೋರಣೆಯನ್ನು ಮುಂದುವರಿಸಿದ್ದಾರೆ.

ಡೆಮಾಕ್ರಟಿಕ್ ಪಕ್ಷದ ಬೈಡೆನ್​ರ ಮುಂದೆ ಸೋಲು ಒಪ್ಪಿಕೊಳ್ಳುವುದ ‘ಕಷ್ಟ’ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದ ಅವರು, ಡಿಸೆಂಬರ್ 14ರಂದು ಬೈಡೆನ್ ವಿಜಯಿಯೆಂದು ಘೋಷಿಸಿದರೆ ನಿಶ್ಚಿತವಾಗಿಯೂ ಶ್ವೇತಭವನ ತೊರೆಯುವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಚುನಾವಣೆಯಲ್ಲಿ ವ್ಯಾಪಕ ಮೋಸ ನಡೆದಿರುವುದರಿಂದ ಸೋಲನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟ’ ಎಂದೂ ಅವರು ಹೇಳಿದರು.

ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ ಬೈಡೆನ್ 306 ಹಾಗೂ ಟ್ರಂಪ್ 232 ಎಲೆಕ್ಟೋರಲ್ ಬೆಂಬಲ ಪಡೆದಿದ್ದಾರೆ. ಡಿ. 14ರಂದು ಎಲೆಕ್ಟೋರಲ್​ಗಳು ಅಧಿಕೃತವಾಗಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ.