ಕೆ.ಆರ್.ಪೇಟೆ ತಾಲೂಕು ದರಖಾಸ್ತು ಸಮಿತಿಯ ಸದಸ್ಯ ಬಿ.ಎಲ್.ದೇವರಾಜು ನೇತೃತ್ವದಲ್ಲಿ ಕೆ.ಆರ್.ಪಟ್ಟಣದ ತಾಲೂಕು ಆಡಳಿತ ಸೌಧದ ಹೊರ ಆವರಣದಲ್ಲಿ ರೈತರ ಅರ್ಜಿಗಳನ್ನು ಸ್ವೀಕರಿಸಲಾಯಿತು.  
ನ್ಯೂಸ್

ಅಕ್ರಮ-ಸಕ್ರಮಕ್ಕೆ ರೈತರಿಂದ ಅರ್ಜಿ ಸ್ವೀಕಾರ

ಕೆ.ಆರ್.ಪೇಟೆ : ನಮೂನೆ 50 ಅಡಿಯಲ್ಲಿ ಈ ಹಿಂದೆ ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಿರುವ ನೂರಾರು ರೈತರ ಅರ್ಜಿಗಳನ್ನು ತಾಲೂಕು ದರಖಾಸ್ತು ಸಮಿತಿಯ ಸದಸ್ಯರು ಸ್ವೀಕರಿಸಿದರು.

ತಾಲೂಕು ದರಖಾಸ್ತು ಸಮಿತಿಯ ಸದಸ್ಯ ಹಾಗೂ ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ನೇತೃತ್ವದಲ್ಲಿ ಪಟ್ಟಣದ ತಾಲೂಕು ಆಡಳಿತ ಸೌಧದ ಹೊರ ಆವರಣದಲ್ಲಿ ಬೆಳಗ್ಗೆ 10.30ರಿಂದ ರಿಂದ ಮಧ್ಯಾಹ್ನ 2.30 ರವರೆಗೆ ಅರ್ಜಿ ಸಲ್ಲಿಸಿ ತಾವು ಉಳುಮೆ ಮಾಡುತ್ತಿರುವ ಭೂಮಿಯ ಸಕ್ರಮಾತಿಯಿಂದ ವಂಚಿತರಾಗಿರುವ ನೂರಾರು ರೈತರ ಅರ್ಜಿಗಳನ್ನು ಸ್ವೀಕರಿಸಿದರು.

ಗೋಮಾಳ ಸೇರಿದಂತೆ ಸರ್ಕಾರಿ ಭೂಮಿಯನ್ನು ಹಲವು ದಶಕಗಳಿಂದ ಉಳುಮೆ ಮಾಡಿಕೊಂಡು ಭೂ ಸ್ವಾಧೀನದಲ್ಲಿರುವ ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ 1992 ರಲ್ಲಿ ಅಕ್ರಮ ಸಕ್ರಮಕ್ಕಾಗಿ ನಮೂನೆ 50 ಅಡಿ ಅರ್ಜಿ ಆಹ್ವಾನಿಸಿತ್ತು. ಸರ್ಕಾರದ ಸೂಚನೆಯ ಮೇರೆಗೆ ತಾಲೂಕಿನ ಸಾವಿರಾರು ರೈತರು ತಾವು ಸ್ವಾಧೀನದಲ್ಲಿರುವ ಸರ್ಕಾರಿ ಭೂಮಿಯ ಸಕ್ರಮಾತಿಗಾಗಿ ರಾಜ್ಯ ಸರ್ಕಾರ ನೇಮಿಸಿದ ಅಕ್ರಮ-ಸಕ್ರಮ ಸಮಿತಿ(ದರಕಾಸು ಸಮಿತಿ) ಮುಂದೆ ಅರ್ಜಿ ಸಲ್ಲಿಸಿದ್ದರು. ನಿಗದಿತ ಸಮಯದಲ್ಲಿ ದರಖಾಸ್ತು ಸಮಿತಿಯ ಮುಂದೆ ಇದ್ದ ಅರ್ಜಿಗಳು ವಿಲೇ ಆಗಿರಲ್ಲಿಲ್ಲ. ರೈತರ ಅನುಕೂಲಕ್ಕೆ ಮತ್ತಷ್ಟು ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ 1998 ರಲ್ಲಿ ನಮೂನೆ 53 ಮತ್ತು 2017-18 ನೇ ಸಾಲಿನಲ್ಲಿ ನಮೂನೆ 57 ರ ಅಡಿಯಲ್ಲಿ ರೈತರಿಂದ ಅಕ್ರಮ-ಸಕ್ರಮಕ್ಕೆ ಮತ್ತೆ ಅರ್ಜಿ ಆಹ್ವಾನಿಸಿ ಸಮಿತಿ ರಚನೆ ಮಾಡಿತ್ತು. ಸರ್ಕಾರದ ಅಕ್ರಮ-ಸಕ್ರಮ ಸಮಿತಿಯ ಮುಂದೆ ನಮೂನೆ 50, 53 ಮತ್ತು 57 ರ ಅರ್ಜಿಗಳು ಪರಿಶೀಲನೆಗೆ ಬರಬೇಕಾಗಿತ್ತು. ಆದರೆ ಈ ಹಿಂದೆ ಕೆ.ಆರ್.ಪೇಟೆ ತಾಲೂಕಿನ ತಹಸೀಲ್ದಾರ್ ಆಗಿದ್ದ ವ್ಯಕ್ತಿಯೊಬ್ಬರು ಕೆ.ಆರ್.ಪೇಟೆ ತಾಲೂಕಿನಲ್ಲಿ ನಮೂನೆ 50 ರ ಅಡಿಯಲ್ಲಿ ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದ ಎಲ್ಲ ರೈತರ ಅರ್ಜಿಗಳನ್ನು ವಿಲೇ ಮಾಡಿದ್ದು ನಮೂನೆ 50 ರ ಯಾವುದೇ ಅರ್ಜಿಗಳು ಬಾಕಿಯಿಲ್ಲ ಎಂದು ತಪ್ಪು ವರದಿ ನೀಡಿದ್ದರು. ಇದರಿಂದ ನಮೂನೆ 50 ರ ಅಡಿ ಅಕ್ರಮ-ಸಕ್ರಮಕ್ಕೆ ಅರ್ಜಿ ಹಾಕಿರುವ ರೈತರು ವಂಚಿತರಾಗಿರುವುದನ್ನು ಮನಗಂಡ ತಾಲೂಕು ದರಖಾಸ್ತು ಸಮಿತಿಯ ಸದಸ್ಯರಾದ ಬಿ.ಎಲ್.ದೇವರಾಜು, ಬಸ್ತಿ ರಂಗಪ್ಪ ಮತ್ತು ಕೋಮಲಾ ರಾಯಪ್ಪಗೌಡ ಅವರು ನಮೂನೆ 50 ರ ವಂಚಿತ ರೈತರಿಂದ ಅರ್ಜಿ ಸ್ವೀಕರಿಸಿ ತಹಸೀಲ್ದಾರರ ತಪ್ಪು ವರದಿಯಿಂದ ಅನ್ಯಾಯಕ್ಕೊಳಗಾಗಿರುವ ರೈತರ ನೆರವಿಗೆ ಮುಂದಾಗುವುದಾಗಿ ತಿಳಿಸಿದ್ದರು. ಅದರಂತೆ ಇಂದು ತಾಲೂಕು ಆಡಳಿತ ಸೌಧದ ಮುಂದೆ ಅರ್ಜಿ ಸ್ವೀಕರಿಸಿದರು.

ಇಂದು ಸ್ವೀಕರಿಸಿದ ಅರ್ಜಿಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಹಿಂದಿನ ತಹಸೀಲ್ದಾರರ ಸುಳ್ಳು ವರದಿಯಿಂದ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ನಮೂನೆ 50 ಅರ್ಜಿಗಳನ್ನು ದರಖಾಸ್ತು ಸಮಿತಿಯ ಮುಂದೆ ಪರಿಶೀಲನೆಗೆ ಮತ್ತೆ ಮಂಡಿಸುವಂತೆ ಕೋರಲಾಗುತ್ತದೆ. ತಪ್ಪು ವರದಿ ನೀಡಿರುವ ಈ ಹಿಂದಿನ ತಹಸೀಲ್ದಾರ್ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಲು ಒತ್ತಾಯಿಸಲಾಗುವುದೆಂದು ಬಿ.ಎಲ್.ದೇವರಾಜು ಪತ್ರಿಕೆಗೆ ತಿಳಿಸಿದರು.

ಸಮಿತಿಯ ಸದಸ್ಯರಾದ ಬಿ.ಎಲ್.ದೇವರಾಜು, ಬಸ್ತಿ ರಂಗಪ್ಪ ಮತ್ತು ಸದಸ್ಯೆ ಕೋಮಲಾ ಅವರ ಪತಿ ಗುಡುಗನಹಳ್ಳಿ ರಾಯಪ್ಪ ಇದ್ದರು.