ನ್ಯೂಸ್

20 ಪರಿಷತ್ ಸದಸ್ಯರಿಂದ ಪ್ರಮಾಣ ಸ್ವೀಕಾರ, ಐವರು ಗೈರು

theerthaswamy

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ 25 ಸದಸ್ಯರ ಪೈಕಿ 20 ಮಂದಿ ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಭಾಪತಿ ಸಮ್ಮುಖ ನಡೆದ ಕಾರ್ಯಕ್ರಮದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಹಲವು ನಾಯಕರು ಪಾಲ್ಗೊಂಡು ನೂತನ ಸದಸ್ಯರಿಗೆ ಶುಭಕೋರಿದರು.

ನೂತನ ಸದಸ್ಯರಾದ ಬಿ.ಜಿ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಲಖನ್ ಜಾರಕಿಹೊಳಿ, ಗಣಪತಿ ಉಳ್ವೇಕರ್, ಎಂ.ಕೆ.ಪ್ರಾಣೇಶ್ ದೇವರ ಹೆಸರಿನಲ್ಲಿ, ಪ್ರದೀಪ ಶೆಟ್ಟರ್, ಕೆ.ಎಸ್.ನವೀನ್, ಡಿ.ಎಸ್.ಅರುಣ್, ದಿನೇಶ್ ಗೂಳಿಗೌಡ, ಎಚ್.ಎಸ್.ಗೋಪಿನಾಥ್ ಹಾಗೂ ಡಾ.ಡಿ.ತಿಮ್ಮಯ್ಯ ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಚನ್ನರಾಜ ಹಟ್ಟಿಹೊಳಿ ಅವರು ವೀರಭದ್ರೇಶ್ವರ ಮತ್ತು ಬಸವೇಶ್ವರ, ಶರಣಗೌಡ ಪಾಟೀಲ ಬಯ್ಯಾಪುರ ಭಗವಂತ ಮತ್ತು ತಂದೆ-ತಾಯಿ, ರಾಘವೇಂದ್ರ ರಾಜಣ್ಣ ಭಗವಂತ ಮತ್ತು ರೈತರು ಹಾಗೂ ಸಿ.ಎನ್.ಮಂಜೇಗೌಡ ಚಾಮುಂಡೇಶ್ವರಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಸಚಿವ ಕೋಟ ಶ್ರೀನಿವಾಸ ಪೂಜಾರಿ ತಮ್ಮ ರಾಜಕೀಯ ಗುರು ವಿ.ಎಸ್.ಆಚಾರ್ಯರನ್ನು ಪ್ರಮಾಣ ವಚನದ ವೇಳೆ ಸ್ಮರಿಸಿದ್ದು ಗಮನಾರ್ಹ ಸಂಗತಿಯಾಗಿತ್ತು.

ಸುಜಾ ಕುಶಾಲಪ್ಪ ಕೊಡಗು ಧಿರಿಸಿನಲ್ಲಿ ಆಗಮಿಸಿದ್ದು, ಮೇಕೆದಾಟು ಜಟಾಪಟಿ ಸಂದರ್ಭದಲ್ಲಿಯೇ ಬಸವರಾಜ ಬೊಮ್ಮಾಯಿ ಹಾಗೂ ಡಿ.ಕೆ.ಶಿವಕುಮಾರ್ ಹಸ್ತಲಾಘವ ಮಾಡಿದ್ದು, ರಾಮನಗರ ಪ್ರಕರಣದಲ್ಲಿ ಎದೆಯುಬ್ಬಿಸಿ ನುಗ್ಗಿದ್ದ ಪರಿಷತ್ ನೂತನ ಸದಸ್ಯ ರವಿಯನ್ನು ಕಂಡು ಸಿಎಂ ಕಿಚಾಯಿಸಿದ್ದು ವಿಶೇಷ ಸಂದರ್ಭವಾಗಿ ಕಾಣಿಸಿತು.

ರಾಜ್ಯದ ಶಕ್ತಿಕೇಂದ್ರದಲ್ಲೇ, ಸಿಎಂ ಸಮ್ಮುಖ ದಲ್ಲೇ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗಿದ್ದು ಕಾಣಿಸಿತು. ಪದಗ್ರಹಣ ಸಮಾರಂಭಕ್ಕೆ ಅನಿರೀಕ್ಷಿತ ಸಂಖ್ಯೆಯಲ್ಲಿ ಹೊಸ ಸದಸ್ಯರ ಸ್ನೇಹಿತರು, ಕುಟುಂಬದವರು ಆಗಮಿಸಿದ್ದರಿಂದ ಪೊಲೀಸರು ಸಹ ಹೈರಾಣಾಗಿ ಹೋದರು. ಮಾಸ್ಕ್ ಧರಿಸುವಂತೆ ಉದ್ಘೋಷಕರು ನಿರಂತರವಾಗಿ ಕರೆ ಕೊಡುತ್ತಿದ್ದರೂ ಅಲ್ಲಿದ್ದವರು ಆ ಸಂದೇಶ ಕಿವಿಮೇಲೆ ಹಾಕಿಕೊಂಡಂತೆ ಕಾಣಿಸಲಿಲ್ಲ. ನೂತನ ಸದಸ್ಯರೊಂದಿಗೆ ಬಂದವರ ಫೋಟೋ ತೆಗೆಸಿಕೊಳ್ಳುವ ಧಾವಂತ ಮೇರೆ ಮೀರಿತ್ತು. ಇದು ಇನ್ನಷ್ಟು ನಿಯಮ ಉಲ್ಲಂಘನೆಗೂ ಕಾರಣವಾಗಿತ್ತು. ಬೆಳಗಾವಿಯ ಪಕ್ಷೇತರ ಸದಸ್ಯ ಲಖನ್ ಜಾರಕಿಹೊಳಿ ಹಾಗೂ ದಕ್ಷಿಣ ಕನ್ನಡದ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಪರವಾಗಿ ಘೋಷಣೆಗಳ ಅಬ್ಬರ ಜೋರಾಗಿತ್ತು.

ನನ್ನ ಪುನರಾಯ್ಕೆಗೆ ಅವಕಾಶ ಮಾಡಿಕೊಟ್ಟ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಮತ ನೀಡಿದ ಜನಪ್ರತಿನಿಧಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ, ಕೃತಜ್ಞತೆ ಸಲ್ಲಿಸುತ್ತೇನೆ.

|ಬಿ.ಜಿ.ಪಾಟೀಲ್ ಎಂಎಲ್​ಸಿ

ರೇವಣ್ಣ ಸೂಚನೆ ಬಾರದ ಸೂರಜ್: ವಿವಿಧ ಕಾರಣಗಳಿಂದಾಗಿ ಐವರು ವಿಧಾನ ಪರಿಷತ್ ಸದಸ್ಯರು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದರು. ಪ್ರಮುಖವಾಗಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಸೂಚನೆ ಮೇರೆಗೆ ಅವರ ಪುತ್ರ ಸೂರಜ್ ರೇವಣ್ಣ ಪ್ರಮಾಣ ವಚನ ಕಾರ್ಯಕ್ರಮದಿಂದ ದೂರ ಉಳಿದರೆಂದು ತಿಳಿದು ಬಂದಿದೆ. ಒಳ್ಳೆಯ ದಿನ ಪ್ರಮಾಣ ವಚನ ಸ್ವೀಕರಿಸಬೇಕೆಂಬ ಸಲಹೆ ಅನುಸಾರ ಮುಂದಿನ ವಾರ ಅವರು ಪ್ರಮಾಣವಚನ ಸ್ವೀಕರಿಸು ವರು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.