ಹೈದರಾಬಾದ್: ಮಂಗಳವಾರ ಹೈದರಾಬಾದಿನ ರಿಯಲ್ ಎಸ್ಟೇಟ್ ಕಂಪನಿಯೊಂದರ ಮೇಲೆ ನಡೆದ ದಾಳಿಯಲ್ಲಿ ಭ್ರಷ್ಟಾಚಾರ ನಿಗ್ರಹ ಪಡೆ (ಎಸಿಬಿ)ಯು ಬರೋಬ್ಬರಿ 4.47 ಕೋಟಿ ರೂ. ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದೆ.
ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಯಾವುದೇ ಲೆಕ್ಕವಿಲ್ಲದ ಈ ಹಣವು ತೆಲಂಗಾಣ ಇನ್ಸುರೆನ್ಸ್ ಮೆಡಿಕಲ್ ಸರ್ವೀಸ್ನ ಮಾಜಿ ನಿರ್ದೇಶಕಿ ದೇವಿಕಾ ರಾಣಿಗೆ ಸಂಬಂಧಿಸಿದ್ದು ಎನ್ನಲಾಗಿದೆ. ಈಕೆ ಸದ್ಯ ಜೈಲಿನಲ್ಲಿದ್ದು, ತೆಲಂಗಾಣದಲ್ಲಿ ಕ್ವೀನ್ ಆಫ್ ಕರಪ್ಶನ್ (ಭ್ರಷ್ಟಾಚಾರದ ರಾಣಿ) ಎಂದೇ ಕುಖ್ಯಾತಿ ಗಳಿಸಿದ್ದಾಳೆ.
ದೇವಿಕಾ ರಾಣಿ ನೀಡಿದ ಮಾಹಿತಿ ಆಧಾರದ ಮೇಲೆಯೇ ಎಸಿಬಿ ರಿಯಲ್ ಎಸ್ಟೇಟ್ ಸಂಸ್ಥೆಯ ಮೇಲೆ ದಾಳಿ ನಡೆಸಿ, ಬೃಹತ್ ಮೊತ್ತದ ಹಣವನ್ನು ವಶಕ್ಕೆ ಪಡೆದಿದೆ. ವಶಕ್ಕೆ ಪಡೆದ ಹಣವನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಲು ಇಟ್ಟಿದ್ದರು ಎನ್ನಲಾಗಿದೆ.
ದೇವಿಕಾ ರಾಣಿಯ ಸಹ ಆರೋಪಿ ಫಾರ್ಮಾಸಿಸ್ಟ್ ನಾಗಾ ಲಕ್ಷ್ಮಿಗೂ ಸಹ ವಶಕ್ಕೆ ಪಡೆದ ಹಣದಲ್ಲಿ ಪಾಲಿದೆ ಎಂದು ತಿಳಿದುಬಂದಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್)