ನ್ಯೂಸ್

ಎಸಿಬಿ ತಾರತಮ್ಯ!

ಬೆಂಗಳೂರು: ರಾಜ್ಯದಲ್ಲಿ ಲೋಕಾಯುಕ್ತಕ್ಕೆ ಪರ್ಯಾಯವೆಂಬಂತೆ ಅಸ್ತಿತ್ವಕ್ಕೆ ಬಂದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಗತ್ಯತೆ ಕುರಿತ ಜಿಜ್ಞಾಸೆ ಮುಂದುವರಿದಿರುವಂತೆಯೇ ಅದರ ಕಾರ್ಯಶೈಲಿ ಕುರಿತೇ ಹೊಸ ಚರ್ಚೆಗಳು ಆರಂಭವಾಗಿವೆ. ದಾಳಿ ವೇಳೆ ಸಿಕ್ಕಿಬಿದ್ದ ಪ್ರಮುಖ ಕೇಸ್​ಗಳನ್ನು ಬಿಟ್ಟು ಸಣ್ಣಪುಟ್ಟ ಪ್ರಕರಣಗಳಿಗೆ ಸೀಮಿತವಾಗಿ ದೋಷಾರೋಪ ಪಟ್ಟಿ ಸಲ್ಲಿಸುತ್ತಿರುವ ಆರೋಪ ಜೀವಪಡೆದುಕೊಂಡಿದೆ.

ಇಲಾಖೆಯಲ್ಲಿ ದಾಖಲಾಗಿರುವ ಉನ್ನತ ಹುದ್ದೆ ಯಲ್ಲಿರುವ ಸರ್ಕಾರಿ ಅಧಿಕಾರಿಗಳು ಹಾಗೂ ಪ್ರಭಾವಿ ರಾಜಕಾರಣಿಗಳ ವಿರುದ್ಧದ ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪವಿದೆ. 2016ರಲ್ಲಿ ಎಸಿಬಿ ಆರಂಭವಾದ ಬಳಿಕ 2019 ಜುಲೈ ಅಂತ್ಯದವರೆಗೆ ರಾಜ್ಯದಲ್ಲಿ 1,023 ಪ್ರಕರಣ ದಾಖಲಾಗಿವೆ. ಬೆಂಗಳೂರು ಘಟಕದ ವ್ಯಾಪ್ತಿಯಲ್ಲಿ ಈವರೆಗೆ ಒಟ್ಟು 38 ಪ್ರಕರಣ ಹಾಗೂ ಹೊರಗೆ 483 ಪ್ರಕರಣದಲ್ಲಿ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ. ಆರೋಪಪಟ್ಟಿ ಸಲ್ಲಿಕೆಯಾಗಿರುವ ಬಹುತೇಕ ಪ್ರಕರಣಗಳು ಸಣ್ಣಪುಟ್ಟ ಕೇಸ್​ಗಳು.

ಪ್ರತಿಷ್ಠಿತರಿಗೆ ಅಭಯ: ಬಿಡಿಎ ಇಂಜಿನಿಯರ್​ಗಳು, ಕೆಐಎಡಿಬಿ ಅಧಿಕಾರಿಗಳು, ಪಿಡಬ್ಲ್ಯೂಡಿ ಇಂಜಿನಿಯರ್​ಗಳು, ಬಿಬಿಎಂಪಿ ಅಧಿಕಾರಿಗಳು, ಕಾರ್ವಿುಕ ಇಲಾಖೆ ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಸೇರಿ ಉನ್ನತ ಹುದ್ದೆಯಲ್ಲಿರುವ ಕೆಲ ಅಧಿಕಾರಿಗಳ ಮೇಲಿನ ದಾಳಿ ವೇಳೆ ಲಕ್ಷಾಂತರ ರೂ. ಮೌಲ್ಯದ ಆಸ್ತಿ, ಹಣ ಪತ್ತೆಯಾಗಿದೆ.

ದಾಳಿಯಾಗಿ ವರ್ಷಗಳೇ ಕಳೆದರೂ ಚಾರ್ಜ್​ಶೀಟ್ ಹಾಕಿಲ್ಲ. ಆದರೆ, ಸಣ್ಣ-ಪುಟ್ಟ ಸರ್ಕಾರಿ ನೌಕರರು ಕೆಲಸ ಮಾಡಿಕೊಡಲು ಜನ ಸಾಮಾನ್ಯರ ಬಳಿ 1 ಸಾವಿರ ರೂ.ನಿಂದ 50 ಸಾವಿರ ರೂ.ವರೆಗೆ ಲಂಚ ಕೇಳಿ ಸಿಕ್ಕಿಬಿದ್ದ ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಚಾರ್ಜ್​ಶೀಟ್ ಆಗದ ಪ್ರಕರಣ

ವಿಧಾನಸೌಧ ಪಶ್ಚಿಮ ದ್ವಾರದಲ್ಲಿ 25.76 ಲಕ್ಷ ರೂ. ಸಾಗಾಟದ ವೇಳೆ ಸಿಕ್ಕಿಬಿದ್ದಿದ್ದ ಮಾಜಿ ಸಚಿವ ಪುಟ್ಟರಂಗ ಶೆಟ್ಟಿ ಆಪ್ತ ಸಹಾಯಕನ ವಿರುದ್ಧ ದಾಖಲಾಗಿರುವ ಪ್ರಕರಣ.

2 ಸಾವಿರ ಕೋಟಿ ರೂ.ಗೂ ಹೆಚ್ಚು ಅವ್ಯವಹಾರ ನಡೆದಿದೆ ಎನ್ನಲಾದ ಅಭಿವೃದ್ದಿ ಹಕ್ಕು ವರ್ಗಾವಣೆ (ಟಿಡಿಆರ್) ಹಗರಣ, ಬಿಡಿಎ ಇಂಜಿನಿಯರ್ ಸೇರಿ ಹಲವರ ಬಂಧನವಾಗಿದೆ.

ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಸವಲತ್ತು ನೀಡಿದ ಆರೋಪದಲ್ಲಿ ನಿವೃತ್ತ ಡಿಜಿಪಿ ಎಚ್.ಎನ್. ಸತ್ಯನಾರಾಯಣ ರಾವ್ ವಿರುದ್ಧದ ಪ್ರಕರಣ.

ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ, ಬಿಡಿಎ ಮುಖ್ಯ ಇಂಜಿನಿಯರ್ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹಾಗೂ ಹಣ ಪತ್ತೆಯಾದ ಪ್ರಕರಣ.

ಬೆಂಗಳೂರಿನಲ್ಲಿರುವ ಕಾರ್ವಿುಕ ಭವನದ ಫ್ಯಾಕ್ಟರಿ ಮತ್ತು ಬಾಯ್ಲರ್​ನ ಜಂಟಿ ನಿರ್ದೇಶಕ ಎಸ್.ಎಂ ವಾಸಣ್ಣ, ಎಂ.ಎಸ್.ಬಿಲ್ಡಿಂಗ್​ನಲ್ಲಿರುವ ಡೈರೆಕ್ಟರೇಟ್ ಆಫ್ ಟೌನ್ ಆಂಡ್ ಕಂಟ್ರಿ ಪ್ಲಾನಿಂಗ್ ಜಂಟಿ ನಿರ್ದೇಶಕ ಎಂ.ಸಿ ಶಶಿಕುಮಾರ್, ಕೊರಟಗೆರೆ ಪಿಡಬ್ಲ್ಯುಡಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಿ.ಸಿ ಜಗದೀಶ್, ಬೆಳಗಾವಿ ಜಿಲ್ಲೆಯ ಕಿತ್ತೂರಿನ ಪಿಡಬ್ಲ್ಯುಡಿಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸುರೇಶ್ ಭೀಮಾ ನಾಯ್್ಕ ಮೇಲೆ ನಡೆದ ದಾಳಿ ಪ್ರಕರಣ ತನಿಖಾ ಹಂತದಲ್ಲಿದೆ.

ಕೆಂಗೇರಿ ಕೆಪಿಟಿಸಿಎಲ್ ಅಧೀಕ್ಷಕ ಅಭಿಯಂತರ ಎನ್.ಆರ್.ಎಂ. ನಾಗರಾಜನ್, ಬಿಬಿಎಂಪಿ ಅಧೀಕ್ಷಕ ಅಭಿಯಂತರ ಬಿ.ಎಸ್ ಪ್ರಹ್ಲಾದ್, ಬಿಡಿಎ ಉಪನಿರ್ದೇಶಕ ಆರ್.ವಿ ರವಿಕಾಂತ್ ರಾಜು ಮೇಲೆ ದಾಳಿ ನಡೆಸಿದ ದಾಳಿ ಪ್ರಕರಣ

ರಾಜಾಜಿನಗರದ ಆರ್.ಟಿ.ಓ ಕಚೇರಿ ಮೇಲೆ ದಾಳಿ ನಡೆಸಿ 8.72 ಲಕ್ಷ ರೂ. ನಗದು ಜಪ್ತಿ ಪ್ರಕರಣ

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕುಲಸಚಿವರಾಗಿದ್ದ ಕಲ್ಲಪ್ಪ ಎಂ.ಹೊಸಮನಿ, ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಹಾಯಕ ಅಭಿಯಂತರ ಮಹದೇವಪ್ಪ ಅವರ ನಿವಾಸ, ಕಚೇರಿ ಮೇಲೆ ಎಸಿಬಿ ದಾಳಿ

ಕ್ಲೀನ್​ಚಿಟ್ ಕೇಸ್​ಗಳು

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಹ್ಯೂಬ್ಲೋಟ್ ವಾಚ್ ಪ್ರಕರಣ

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಾಲೀಕನಿಗೆ ಸೂಕ್ತ ರಕ್ಷಣೆ ಒದಗಿಸುವ ವಿಚಾರವಾಗಿ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಹಾಗೂ ಎಫ್​ಎಸ್​ಎಲ್ ನಿರ್ದೇಶಕ ವಿ.ಜಿ.ನಾಯಕ್ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಬಿ-ರಿಪೋರ್ಟ್

ಉತ್ತರ ಕನ್ನಡದ ಈ ಹಿಂದಿನ ಎಸ್.ಪಿ. ವಿರುದ್ಧ ದಾಖಲಾಗಿದ್ದ ಪ್ರತ್ಯೇಕ ಪ್ರಕರಣದಲ್ಲಿ ಬಿ-ರಿಪೋರ್ಟ್

ಅನುಮತಿ ಸಿಕ್ಕಿಲ್ಲ

ಎಸಿಬಿ ಸುಪರ್ದಿಯಲ್ಲಿ 1,040ಕ್ಕೂ ಅಧಿಕ ಪ್ರಕರಣಗಳಿವೆ. ಇದರಲ್ಲಿ ಲಂಚ ಸ್ವೀಕಾರ ಪ್ರಕರಣಗಳೇ ಜಾಸ್ತಿ. ಅಕ್ರಮ ಆಸ್ತಿ ಗಳಿಕೆ ಸಂಬಂಧ ನಡೆದ ದಾಳಿಯಲ್ಲಿ ಸಿಕ್ಕಿಬಿದ್ದಿರುವ ಕೆಲ ಸರ್ಕಾರಿ ಅಧಿಕಾರಿಗಳ ವಿರುದ್ಧ ಅಭಿಯೋಜನೆ ಮಂಜೂರಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇನ್ನೂ ಕೆಲ ಪ್ರಕರಣಗಳಿಗೆ ವಿವಿಧ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ಇದೆ. ಮತ್ತೆ ಕೆಲ ಪ್ರಕರಣಗಳು ಪ್ರಾಥಮಿಕ ವಿಚಾರಣೆ ಹಂತದಲ್ಲಿವೆ.

ದಾಳಿಗೊಳಗಾದ ಆರೋಪಿಯ ಆಸ್ತಿ-ಖರ್ಚು ಹಾಗೂ ಆದಾಯಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ನಂತರ ಚಾರ್ಜ್​ಶೀಟ್ ಸಲ್ಲಿಸಬೇಕಾಗುತ್ತದೆ. ಇಷ್ಟೆಲ್ಲ ಪ್ರಕ್ರಿಯೆಗಳನ್ನು ಮುಗಿಸಲು ಕಾಲಾವಕಾಶ ಬೇಕಿರುವುದರಿಂದ ವಿಳಂಬವಾಗುತ್ತಿದೆ. | ರಮೇಶ್ ಬಾಬು ಸರ್ಕಾರಿ ಅಭಿಯೋಜಕರು, ಲೋಕಾಯುಕ್ತ ವಿಶೇಷ ಕೋರ್ಟ್

ವಿನಾಶ ಮೂಡಂಬಿಕಾನ