ಜೈಪುರ: ರಾಜಸ್ಥಾನ ರಾಜಕೀಯದ ಸ್ವರೂಪ ದಿನದಿನಕ್ಕೂ ಬದಲಾಗುತ್ತಿದೆ. ಇದೀಗ ಕಾಂಗ್ರೆಸ್ನಿಂದ ಉಚ್ಚಾಟನೆಗೊಂಡಿರುವ ಶಾಸಕರಾದ ಭನ್ವರ್ಲಾಲ್ ಶರ್ಮಾ ಮತ್ತು ವಿಶ್ವೇಂದ್ರ ಸಿಂಗ್ ಅವರಿಗೆ ರಾಜಸ್ಥಾನ ಭ್ರಷ್ಟಾಚಾರ ವಿರೋಧಿ ದಳ ನೋಟಿಸ್ ನೀಡಿದ್ದು, ಮೂರು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ರಾಜಸರ್ಕಾರವನ್ನು ಉರುಳಿಸಲು ಬಿಜೆಪಿಯೊಂದಿಗೆ ಸೇರಿ ಹುನ್ನಾರ ನಡೆಸುತ್ತಿದ್ದಾರೆ ಎಂಬ ಆರೋಪದಡಿ ಕಾಂಗ್ರೆಸ್ ಇವರಿಬ್ಬರನ್ನೂ ಉಚ್ಚಾಟನೆ ಮಾಡಿತ್ತು. ಅದಕ್ಕೆ ಸಂಬಂಧಪಟ್ಟಂತೆ ಮೂರು ಆಡಿಯೋ ಕ್ಲಿಪ್ನ್ನು ಕೂಡ ಕಾಂಗ್ರೆಸ್ ಬಿಡುಗಡೆ ಮಾಡಿದೆ. ಆಡಿಯೋ ಕ್ಲಿಪ್ನ ಸಂಭಾಷಣೆಗೆ ಸಂಬಂಧಪಟ್ಟಂತೆ ಭನ್ವರ್ಲಾಲ್ ಅವರ ವಿರುದ್ಧ ಎಸಿಬಿ ಜು.17ರಂದು ಎಫ್ಐಆರ್ನ್ನೂ ದಾಖಲಿಸಿದೆ.
ಹಾಗೇ, ಇದೇ ಆಡಿಯೋ ಟೇಪ್ಗೆ ಸಂಬಂಧಿಸಿದ ತನಿಖೆಗೆ ಹಾಜರಾಗುವಂತೆ ವಿಶ್ವೇಂದ್ರ ಸಿಂಗ್ ಅವರಿಗೂ ಎಸಿಬಿ ಸೂಚನೆ ನೀಡಿದೆ.
ಕಾಂಗ್ರೆಸ್ ಸರ್ಕಾರ ಉರುಳಿಸುವ ಸಲುವಾಗಿ ನಡೆಯುತ್ತಿರುವ ಪಿತೂರಿಯಲ್ಲಿ ಈ ಇಬ್ಬರೂ ಭಾಗಿಯಾಗಿದ್ದಾರೆ ಎಂದು ರಾಜ್ಯ ಸರ್ಕಾರದ ಮುಖ್ಯ ಸಚೇತಕ ಮಹೇಶ್ ಜೋಶಿ ದೂರು ನೀಡಿದ್ದರು. ಇದನ್ನೂ ಓದಿ: ಕೊವಿಡ್-19ನಿಂದ ತತ್ತರಿಸಿರುವ ಅಮೆರಿಕಕ್ಕೆ ಆಘಾತ; ಶುರುವಾಗಿದೆ ಮತ್ತೊಂದು ಅಪಾಯಕಾರಿ ಸಾಂಕ್ರಾಮಿಕ ರೋಗ
ಅಷ್ಟೇ ಅಲ್ಲ, ಎರಡು ಆಡಿಯೋ ಟೇಪ್ಗಳಲ್ಲಿ ಶಾಸಕ ಭನ್ವರ್ಲಾಲ್ ಶರ್ಮಾ ಅವರ ಧ್ವನಿ ಸ್ಪಷ್ಟವಾಗಿ ಕೇಳುತ್ತಿದೆ. ಅವರು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಅವರ ಜತೆ ಸರ್ಕಾರ ಉರುಳಿಸುವ ಮತ್ತು ಹಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಗಜೇಂದ್ರ ಸಿಂಗ್ ಅವರು ಇದು ತಮ್ಮ ಧ್ವನಿಯಲ್ಲ. ಬೇಕಾದರೆ ತನಿಖೆಯಾಗಲಿ ಎಂದಿದ್ದಾರೆ.
ಇನ್ನು ಮೂರನೇ ಆಡಿಯೋ ಟೇಪ್ನಲ್ಲಿ ಕೇಳಿಬಂದಿದ್ದು ವಿಶ್ವೇಂದ್ರ ಸಿಂಗ್ ಅವರ ಧ್ವನಿ ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ, ಎಸಿಬಿ ಅವರಿಗೂ ನೋಟಿಸ್ ನೀಡಿದೆ.(ಏಜೆನ್ಸೀಸ್)