ನ್ಯೂಸ್

ರಾಜಕೀಯ ಪ್ರೇರಿತ ಪಠ್ಯ ಪರಿಷ್ಕರಣೆ ಕೈಬಿಡದಿದ್ದರೆ ಹೋರಾಟ: ಎಬಿವಿಪಿ ಎಚ್ಚರಿಕೆ

ಬೆಂಗಳೂರು: ಅವೈಜ್ಞಾನಿಕ, ಸೈದ್ಧಾಂತಿಕ ಹಾಗೂ ರಾಜಕೀಯ ಪ್ರೇರಿತ ಪಠ್ಯಪುಸ್ತಕ ಪರಿಷ್ಕರಣೆ ನೀತಿಯನ್ನು ಕೈಬಿಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುತ್ತದೆ ಎಂದು ರಾಜ್ಯ ಕಾಂಗ್ರೆಸ್​ ಸರ್ಕಾರಕ್ಕೆ ಎಬಿವಿಪಿ ಎಚ್ಚರಿಕೆ ನೀಡಿದೆ.

ಕರ್ನಾಟಕದಲ್ಲಿ ನೂತನ ಸರ್ಕಾರ ರಚನೆಯಾದ ನಂತರ ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ವ್ಯಾಪಕವಾದ ಚರ್ಚೆ ನಡೆಯುತ್ತಿದೆ. ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ದಾರಿದೀಪವಾಗಬೇಕೇ ಹೊರತು ಯಾವುದೇ ರಾಜಕೀಯ ಪ್ರೇರಿತ ಸಿದ್ಧಾಂತದ ಆಧಾರದಲ್ಲಿ ಇರಬಾರದು. ಸರ್ಕಾರಗಳು ಬದಲಾದಂತೆ ಪಠ್ಯಪುಸ್ತಕಗಳು ಬದಲಾವಣೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರ ಮೇಲೆಯೂ ಕೆಟ್ಟ ಪರಿಣಾಮ ಬೀರಲಿದೆ. ಪಠ್ಯ ಬದಲಾವಣೆ ವಿದ್ಯಾರ್ಥಿಗಳಲ್ಲಿ ಗೊಂದಲದ ಭಾವನೆ ಮೂಡುತ್ತದೆ.

ಹಾಲಿ ಸರ್ಕಾರವು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಹಿಂದಿನ ಸರ್ಕಾರದ ಸಂದರ್ಭದಲ್ಲಿ ನಡೆದ ಪರಿಷ್ಕರಣೆಗೆ ಸಂಬಂಧಿಸಿದ ಪಠ್ಯಗಳನ್ನು ತೆಗೆದು ಹಾಕುವ ಮೂಲಕ ಪದೇ ಪದೆ ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿರುವುದರಿಂದ ವಿದ್ಯಾರ್ಥಿಗಳು ವಿಚಲಿತರಾಗಿದ್ದಾರೆ. ಪಠ್ಯ ಪರಿಷ್ಕರಣೆಗೆ ಪಾಲಕರಾಗಲೀ ಅಥವಾ ವಿದ್ಯಾರ್ಥಿಗಳಾಗಲೀ ಒತ್ತಾಯ ಮಾಡಿಲ್ಲ. ಆದರೆ, ಕೆಲವೇ ಜನರ ಮನವಿಯ ಮೇಲೆ ಸರ್ಕಾರವು ಪರಿಷ್ಕರಣೆ ಮಾಡುವುದರಿಂದ ರಾಜಕೀಯ ಪ್ರೇರಿತ ಮತ್ತು ಸಂವಿಧಾನ ವಿರೋಧಿ ನೀತಿ ಸ್ಪಷ್ಟವಾಗಿದೆ ಎಂದು ಎಬಿವಿಪಿ ತನ್ನ ಪ್ರಕಟಣೆಯಲ್ಲಿ ಆರೋಪಿಸಿದೆ.