ಶಿವಮೊಗ್ಗ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತದ 44ನೇ ಪ್ರಾಂತ ಸಮ್ಮೇಳನವು ಜ.31ರಿಂದ ಫೆ .2ರವರೆಗೆ ನಗರದ ಅಲ್ಲಮಪ್ರಭು ಮೈದಾನದಲ್ಲಿ ಜರುಗಲಿದೆ ಎಂದು ಪರಿಷತ್ ರಾಜ್ಯ ಸಂಚಾಲಕ ಎಚ್.ಕೆ.ಪ್ರವೀಣ್ ಹೇಳಿದರು.
ಜ.31ರ ಬೆಳಗ್ಗೆ 10ಕ್ಕೆ ಧ್ವಜಾರೋಹಣ ಹಾಗೂ ಪ್ರದರ್ಶಿನಿ ಉದ್ಘಾಟನೆ ಮೂಲಕ ಸಮ್ಮೇಳನಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಶ್ರೀ ಕ್ಷೇತ್ರ ಕೂಡಲಿ ಮಹಾಸಂಸ್ಥಾನ ಮಠದ ಶ್ರೀ ಅಭಿನವ ಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಈ ಸಮ್ಮೇಳನದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ 10 ಸಂಘಟನಾತ್ಮಕ ವಿಭಾಗಗಳಿಂದ ಅಪೇಕ್ಷಿತ 1,300 ವಿದ್ಯಾರ್ಥಿಗಳು ಹಾಗೂ ಆಧ್ಯಾಪಕರು ಭಾಗವಹಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
31ರಂದು ಮಧ್ಯಾಹ್ನ 3ಕ್ಕೆ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ. ಪದ್ಮಭೂಷಣ ಡಾ. ಬಿ.ಎನ್.ಸುರೇಶ್, ಇಸ್ರೋ ಕುಲಾಧಿಪತಿ ಪಿ.ವಿ.ಕೃಷ್ಣ ಭಟ್, ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಪ್ರೊ. ರಾಜ್ ಶರಣ್ ಶಾಹಿ ಮುಖ್ಯ ಅತಿಥಿಗಳಾಗಿರುವರು. ಫೆ.2ರಂದು ನಡೆಯುವ ಯುವ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ, ನಿರ್ದೇಶಕ ಎಸ್.ಎನ್.ಸೇತುರಾಮ್ ಮುಖ್ಯ ಅತಿಥಿಗಳಾಗಿರುವರು. ಈ ಸಾಲಿನ ಯುವ ಪುರಸ್ಕಾರ ಪ್ರಶಸ್ತಿಯನ್ನು ಸಾಮಾಜಿಕ ಸೇವಾ ಕ್ಷೇತ್ರ ಮೈಸೂರು ಸತೀಶ್ ಮೇತ್ರಿ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.
ಆರ್‌ಎಸ್‌ಎಸ್ (ಅಟ್) 100 ಪಂಚ ಪರಿವರ್ತನೆ ಕುರಿತು ಆರ್‌ಎಸ್‌ಎಸ್ ಸಹ ಪ್ರಾಂತ ಪ್ರಚಾರಕ ನಂದೀಶ್, ಕ್ಯಾಂಪಸ್ ಕಾರ್ಯ ವಿಷಯದ ಕುರಿತು ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಎಸ್.ಬಾಲಕೃಷ್ಣ, ಶೈಕ್ಷಣಿಕ ವ್ಯವಸ್ಥೆ ಕುರಿತು ಡಾ. ಎಚ್.ಕೆ.ಸತೀಶ್ ಮಾತನಾಡುವರು. ಸಮ್ಮೇಳನದ ಯುವ ಮಂಚ್ ವೇದಿಕೆಯಲ್ಲಿ ಯುವ ಸ್ಪಂದನ ತಂತ್ರಜ್ಞಾನದೊಂದಿಗೆ ಸಮಾಜ ಜೀವನ ಗೋಷ್ಠಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಯುವಜನತೆ ಮತ್ತು ಸಮಾಜ, ಯುವಜನತೆ ಮತ್ತು ತಂತ್ರಜ್ಞಾನ, ಯುವ ಜನತೆ ಮತ್ತು ಪರಿಸರ ಕುರಿತಾಗಿ ಚರ್ಚೆ ನಡೆಯಲಿದೆ. ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಸಮ್ಮೇಳನದ ಭವ್ಯ ಶೋಭಾಯಾತ್ರೆ ಹಾಗೂ ವಾಸವಿ ಮೈದಾನದಲ್ಲಿ ಫೆ.2ರ ಸಂಜೆ 6ಕ್ಕೆ ಸಾರ್ವಜನಿಕ ಸಭೆ ನಡೆಯಲಿದೆ. ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಶಾಲಿನಿ ವರ್ಮ ಮುಖ್ಯ ಭಾಷಣಕಾರರಾಗಿರುವರು ಎಂದರು. ಪ್ರಮುಖರಾದ ಪುನೀತ್, ಸುಧಾ ಶೆಣೈ, ಅಭಿ, ರಂಜನಿ ಸುದ್ದಿಗೋಷ್ಠಿಯಲ್ಲಿದ್ದರು.