ನ್ಯೂಸ್

ಉಪನ್ಯಾಸಕರ ನೇಮಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಮೈಸೂರು: ಸಕಾಲದಲ್ಲಿ ಪಠ್ಯಪುಸ್ತಕ ಪೂರೈಸಬೇಕು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗಳಿಗೆ ಕಾಯಂ ಅಥವಾ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನಿಂದ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಯಿತು.

ರಾಜ್ಯದ ಕಾಲೇಜು ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ 432 ಪದವಿ ಕಾಲೇಜುಗಳಲ್ಲಿ 6 ಸಾವಿರ ಕಾಯಂ ಉಪನ್ಯಾಸಕ ಹುದ್ದೆಗಳಿದ್ದು, ಅದರಲ್ಲಿ ಅರ್ಧದಷ್ಟು ಉಪನ್ಯಾಸಕರು ಈಗಾಗಲೇ ನಿವೃತ್ತಿ ಪಡೆದಿದ್ದಾರೆ. ಕೇವಲ 3 ಸಾವಿರ ಕಾಯಂ ಉಪನ್ಯಾಸಕರೊಂದಿಗೆ 12 ಸಾವಿರ ಅತಿಥಿ ಉಪನ್ಯಾಸಕರ ಸೇವೆಯಿಂದ ಪದವಿ ತರಗತಿಗಳು ನಡೆಯುತ್ತಿವೆ ಎಂದು ದೂರಿದರು.

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುವುದು ವಿದ್ಯಾರ್ಥಿಗಳ ಹಕ್ಕು. ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಆದರೆ, ತಮ್ಮ ಕರ್ತವ್ಯ ಪ್ರಜ್ಞೆ ಮರೆತಂತಿರುವ ಸರ್ಕಾರಗಳು ಪದವಿ ಹಂತದಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕಾಯಂ ಉಪನ್ಯಾಸಕರ ನೇಮಕಾತಿಯಲ್ಲಿ ದೃಢ ನಿಲುವು ತೆಗೆದುಕೊಳ್ಳದಿರುವುದು ಕಳವಳಕಾರಿ ಸಂಗತಿ ಎಂದು ಕಿಡಿ ಕಾರಿದರು.

2025-26ನೇ ಸಾಲಿನಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, 55 ಸಾವಿರ ಅರ್ಜಿಗಳು ಬಂದಿವೆ. ಖಾಲಿ ಇರುವ 12 ಸಾವಿರ ಹುದ್ದ್ದೆಗಳಿಗೆ ಇಷ್ಟೊಂದು ಅರ್ಜಿ ಬಂದಿದ್ದರೂ, ನೇಮಕ ಮಾಡಿಕೊಳ್ಳಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ದೂರಿದರು.

ಈಗಾಗಲೇ ವಿಶ್ವವಿದ್ಯಾಲಯಗಳ ತರಗತಿಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಇಲ್ಲಿಯವರೆಗೆ ಅತಿಥಿ ಉಪನ್ಯಾಸಕರ ನೇಮಕಾತಿ ಆಗದೆ ಇರುವ ಕಾರಣ ವಿದ್ಯಾರ್ಥಿಗಳಿಗೆ ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ. ರಾಜ್ಯದ ಪದವಿ ಕಾಲೇಜುಗಳಿಗೆ ಕಾಯಂ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಲು ಸಾಧ್ಯವಿಲ್ಲದಿದ್ದರೆ ಕನಿಷ್ಠ ಅರ್ಹ ಅತಿಥಿ ಉಪನ್ಯಾಸಕರ ನೇಮಕಾತಿಗೆ ತಕ್ಷಣ ಕ್ರಮ ವಹಿಸಬೇಕು. ಸಕಾಲಕ್ಕೆ ಪಠ್ಯ ಪುಸ್ತಕ ಪೂರೈಸಬೇಕು ಕೆಂದು ಆಗ್ರಹಿಸಿದರು.

ವಿದ್ಯಾರ್ಥಿಗಳ ಬೇಡಿಕೆಗಳು: ಈಗಾಗಲೇ 20 ಸಾವಿರಕ್ಕಿಂತ ಹೆಚ್ಚು ಅರ್ಹ ಅಭ್ಯರ್ಥಿಗಳು ಯುಜಿಸಿ ನಿಯಮಾವಳಿ ಅನ್ವಯ ಅರ್ಹತೆ ಪಡೆದು ಸರ್ಕಾರಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಲು ತಯಾರಿದ್ದಾರೆ. ಹೀಗಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಎಲ್ಲ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಪ್ರತಿ ವರ್ಷ ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಹಲವಾರು ಕಾರಣಗಳಿಗೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಪದವಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದನ್ನು ಖಾತ್ರಿಪಡಿಸಿಕೊಳ್ಳುವ ದೃಷ್ಟಿಯಿಂದ ಯುಜಿಸಿ ನಿಯಮಾವಳಿ ಅನ್ವಯ ಅರ್ಹತೆ ಪಡೆದ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಆಸಕ್ತಿ ವಹಿಸಬೇಕು. ಸರ್ಕಾರಿ ಕಾಲೇಜುಗಳ ಮೂಲಸೌಲಭ್ಯಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು. ಪ್ರಯೋಗಾಲಯ ಸಲಕರಣೆಗಳು, ಕಂಪ್ಯೂಟರ್, ಇನ್ನಿತರ ಮೂಲ ಸೌಲಭ್ಯವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಎಬಿವಿಪಿ ಕಾರ್ಯದರ್ಶಿ ಸಂಜಿತ್, ಸಹ ಕಾರ್ಯದರ್ಶಿ ಎಚ್.ಪಿ. ಪಜ್ವಲ್, ವಸಂತ, ಶಿವಾನಂದ್, ಪ್ರಜ್ವಲ್, ಮಹಿಮಾ ಇತರರು ಇದ್ದರು.