ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಎಚ್.ಕೆ.ಪ್ರವೀಣ್ 
ನ್ಯೂಸ್

11ರಂದು ಸಚಿವರ ಕಚೇರಿ ಎದುರು ಎಬಿವಿಪಿ ಪ್ರತಿಭಟನೆ

ಶಿವಮೊಗ್ಗ: ವಿದ್ಯಾರ್ಥಿ ವೇತನ, ಹಾಸ್ಟೆಲ್, ಬಸ್ ಪಾಸ್ ಮತ್ತಿತರ ಶೈಕ್ಷಣಿಕ ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಜು.11ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಎಚ್.ಕೆ.ಪ್ರವೀಣ್ ಹೇಳಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರಕ್ಕೆ ಶಾಲಾ ಕಾಲೇಜುಗಳಿಗೆ ಬರುತ್ತಿದ್ದು, ಸಕಾಲಕ್ಕೆ ಬಸ್ ಪಾಸ್ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಅರ್ಜಿ ಸಲ್ಲಿಸಿದ ಬಳಿಕ ವಾರದವರೆಗೂ ಕಾಯುವ ಸ್ಥಿತಿ ಇದೆ. ಕೆಲ ಮಕ್ಕಳು ಬಸ್ ಪಾಸ್ ಇಲ್ಲದ್ದಕ್ಕೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ವೇಳಾಪಟ್ಟಿಗೆ ಅನುಗುಣವಾಗಿ ಬಸ್ ಪಾಸ್ ವಿತರಿಸಬೇಕೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಶಕ್ತಿ ಯೋಜನೆ ಜಾರಿ ಬಳಿಕ ಅತಿ ಹೆಚ್ಚು ಮಹಿಳೆಯರು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದು ವಿದ್ಯಾರ್ಥಿಗಳಿಗೆ ನಿಲ್ಲಲೂ ಸ್ಥಳ ಇರುವುದಿಲ್ಲ. ಹಾಗಾಗಿ ಸರ್ಕಾರ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಜತೆಗೆ ಶಾಲಾ ಕಾಲೇಜು ಸಮಯಕ್ಕೆ ಬಸ್‌ಗಳನ್ನು ಓಡಿಸಬೇಕಿದೆ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ 2,500 ಹಾಸ್ಟೆಲ್‌ಗಳಿವೆ. 2.5 ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶವಿದೆ. ಆದರೆ ಪ್ರವೇಶಾತಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಮಾಡಲಾಗುತ್ತಿದೆ. ತರಗತಿಗಳು ಶುರುವಾಗಿ ಮೂರು ತಿಂಗಳು ಕಳೆದರೂ ಸೀಟು ಸಿಗುತ್ತಿಲ್ಲ. ಸ್ಕಾಲರ್‌ಶಿಪ್ ನೀಡದೆ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ. ಸ್ಕಾಲರ್‌ಶಿಪ್ ನೆಚ್ಚಿಕೊಂಡಿದ್ದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವುದು ಕಷ್ಟವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಏಕರೂಪ ವೇಳಾಪಟ್ಟಿಗೆ ಸಂಬಂಧಿಸಿ ಸುತ್ತೋಲೆ ಹೊರಡಿಸಿದ್ದು, ಎಲ್ಲ ವಿವಿಗಳು ಸಮರ್ಪಕವಾಗಿ ಜಾರಿಗೊಳಿಸಬೇಕು. ಸಾವಿರಾರು ವಿದ್ಯಾರ್ಥಿಗಳಿಗೆ ಇದರಿಂದ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಕೆ, ಬಸ್ ಪಾಸ್ ದಿನಾಂಕ ವಿಸ್ತರಿಸುವ ಸಮಸ್ಯೆ ಬಗೆಹರಿಯಲಿದೆ ಎಂದರು.