ಕಾಮರೂಪ್ (ಅಸ್ಸಾಂ): ಎಬಿವಿಪಿ ಕಾರ್ಯಕರ್ತೆಯೊಬ್ಬರು ತಮ್ಮ ಮದುವೆಗಾಗಿ ಕೂಡಿಟ್ಟುಕೊಂಡಿದ್ದ 1 ಲಕ್ಷ ರೂ. ಅನ್ನು ಕೋವಿಡ್ 19 ಪರಿಹಾರ ಕಾರ್ಯಗಳಿಗಾಗಿ ಬಳಸಲು ಅಸ್ಸಾಂ ಸಿಎಂ ಪರಿಹಾರ ನಿಧಿಗೆ ದೇಣಿಗೆಯಾಗಿ ಕೊಟ್ಟು ಔದಾರ್ಯ ಮೆರೆದಿದ್ದಾರೆ.
ಕಾಮರೂಪ್ ಜಿಲ್ಲೆಯ ರಂಗಿಯಾ ಘಟಕದ ಜಂಟಿ ಕಾರ್ಯದರ್ಶಿ ರೀಮಾ ಘೋಷ್ ದೇಣಿಗೆ ನೀಡಿದವರು. ರಂಗಿಯಾ ಶಾಸಕ ಭಾಪೇಶ್ ಕಾಲಿಟಾ ಮೂಲಕ ಈ ಹಣವನ್ನು ಅವರು ಸಿಎಂ ಪರಿಹಾರನಿಧಿಗೆ ಅರ್ಪಿಸಿದರು.
ನಾಗರಿಕ ಸೇವೆ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದ್ದ ರೀಮಾ ಘೋಷ್, ಲಾಕ್ಡೌನ್ ತೆರವಾದ ಬಳಿಕ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವ ಬಯಕೆ ಹೊಂದಿದ್ದರು.
ನಾನು ಆರು ವರ್ಷದವಳಾಗಿದ್ದಾಗಿನಿಂದ ನನ್ನ ತಂದೆ ನನ್ನ ಮದುವೆಗಾಗಿ ಹಣವನ್ನು ಉಳಿಸುತ್ತಿದ್ದರು. ಹೀಗೆ 1,00,099 ರೂ. ಉಳಿತಾಯವಾಗಿತ್ತು. ಈ ಹಣವನ್ನು ನಾನು ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಬಳಸಿಕೊಳ್ಳಲು ಬಯಸಿದ್ದೆ. ಆದರೆ ಈ ನನ್ನ ಬಯಕೆಯನ್ನು ಈಡೇರಿಸಿಕೊಳ್ಳುವ ಮುನ್ನ ಕೋವಿಡ್ 19 ಪಿಡುಗು ಬಂದು ಅಪ್ಪಳಿಸಿತು. ಇದರಿಂದಾಗಿ ಸಾಕಷ್ಟು ಜನರು ತೊಂದರೆಗೆ ಒಳಗಾದರು. ಅವರೆಲ್ಲರಿಗೂ ನನ್ನ ಕೈಯಲ್ಲಾದಷ್ಟು ಸಹಾಯ ಮಾಡಲು ಈ ಹಣವನ್ನು ಸಿಎಂ ಪರಿಹಾರ ನಿಧಿಗೆ ಅರ್ಪಿಸಲು ನಿರ್ಧರಿಸಿದೆ ಎಂದು ರೀಮಾ ಘೋಷ್ ಹೇಳಿದ್ದಾರೆ.
ಉಳಿತಾಯದ ಹಣವನ್ನು ಸಿಎಂ ಪರಿಹಾರ ನಿಧಿಗೆ ಅರ್ಪಿಸುವುದಾಗಿ ಪ್ರಸ್ತಾಪಿಸಿದಾಗ ತಂದೆ ಕೂಡ ತುಂಬುಹೃದಯದಿಂದ ಒಪ್ಪಿಗೆ ಸೂಚಿಸಿದರು. ಇದಕ್ಕಾಗಿ ಅವರಿಗೆ ಕೃತಜ್ಞತೆ ಅರ್ಪಿಸಲು ಬಯಸುವುದಾಗಿ ತಿಳಿಸಿದ್ದಾರೆ.