ಬೆಂಗಳೂರು: ರಾಜ್ಯಪಾಲರ ಕಚೇರಿಯನ್ನ ದುರುಪಯೋಗ ಪಡಿಸಿಕೊಳ್ಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ರಾಜಕೀಯವಾಗಿ ಮಟ್ಟಹಾಕಲು ಬಿಜೆಪಿ ಕುತಂತ್ರ ನಡೆಸಿದ್ದು, ಅದರ ವಿರುದ್ಧ ನಾವೆಲ್ಲರೂ ಒಗ್ಗಟ್ಟಿನಿಂದ ಕಾನೂನಾತ್ಮಕವಾಗಿ ಹಾಗೂ ರಾಜಕೀಯವಾಗಿ ಹೋರಾಟ ನಡೆಸಲಿದ್ದೇವೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ಹೇಳಿದ್ದಾರೆ.
ನಮ್ಮದು ಸುಭದ್ರ ಸರಕಾರ, ಬಹುಮತ ಪಡೆದು ನ್ಯಾಯಯುತವಾಗಿ 5 ಗ್ಯಾರಂಟಿಗಳನ್ನು ನೀಡುವ ಮೂಲಕ ಜನಪ್ರಿಯತೆ ಗಳಿಸಿರುವ ಸರ್ಕಾರ ಇದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಕಳಂಕರಹಿತವಾದ ರಾಜಕೀಯ ಜೀವನ. ಸದ್ಯ 5 ಗ್ಯಾರಂಟಿ ಯೋಜನೆಗಳ ಮೂಲಕ ಮನೆ ಮಾತಾಗಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಬೇಕು ಎಂಬ ಉದ್ದೇಶದಿಂದ
ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸರಿಯಲ್ಲ ಹಾಗೂ ರಾಜ್ಯಪಾಲರ ಈ ನಡೆಯನ್ನ ತೀವ್ರವಾಗಿ ಖಂಡಿಸುತ್ತೆನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಹಿಂಬಾಗಿಲ ಮೂಲಕ ಅಧಿಕಾರ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಬಿಜೆಪಿಗರು ರಾಜ್ಯಪಾಲರ ಕಚೇರಿಯನ್ನು ಬಳಸಿಕೊಂಡು ಕುತಂತ್ರ ನಡೆಸಿದ್ದಾರೆ. ಆ ಕುತಂತ್ರದ ವಿರುದ್ಧ ನಾವೆಲ್ಲರೂ ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಟ ಮಾಡಲಿದ್ದೇವೆ ಎಂದು ಹೇಳಿದ್ದಾರೆ.