ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಹಾಗೂ ಆತ್ಮ ಯೋಜನೆ ಕುರಿತ ಅರಿವು ಕಾರ್ಯಕ್ರಮವನ್ನು ಡಾ. ಆರ್.ಸಿ.ಜಗದೀಶ ಉದ್ಘಾಟಿಸಿದರು. ಕಿರಣ್‌ಕುಮಾರ್, ಅರವಿಂದ, ಸುಜಾತಾ, ಸಿ.ಎ.ಶಿವಪ್ರಕಾಶ್, ಹನುಮಂತಪ್ಪ ಇತರರಿದ್ದರು. 
ನ್ಯೂಸ್

ಕಿರು ಉದ್ಯಮದಲ್ಲಿ ವಿಪುಲ ಅವಕಾಶ

ಶಿವಮೊಗ್ಗ: ಜಿಲ್ಲೆಯಿಂದ ಪ್ರತಿ ವರ್ಷ 100 ಟನ್ ಅಪ್ಪೆ ಮಿಡಿ ವಿದೇಶಕ್ಕೆ ರಫ್ತಾಗುತ್ತಿದೆ. ಮೆಕ್ಕೆಜೋಳದಿಂದ 50ಕ್ಕೂ ಹೆಚ್ಚಿನ ಬಗೆಯ ಖಾದ್ಯಗಳನ್ನು ಮಾಡಬಹುದು. ಹೊಸ ಖಾದ್ಯಗಳ ಸಂಶೋಧನೆಗೂ ವಿಪುಲ ಅವಕಾಶ ಇದೆ ಎಂದು ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ಹೇಳಿದರು.

ಆತ್ಮನಿರ್ಭರ ಭಾರತ ಅಭಿಯಾನ, ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಳ್ಳಿಕೆರೆ ಹಾಗೂ ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುರುವಾರ ಫಲಾನುಭವಿಗಳಿಗೆ ಏರ್ಪಡಿಸಿದ್ದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಹಾಗೂ ಆತ್ಮ ಯೋಜನೆ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೊಸದಾಗಿ ಕಿರು ಉದ್ದಿಮೆ ಆರಂಭಿಸುವವರಿಗೆ ವಿವಿಯಿಂದ ಎಲ್ಲ ಸಹಕಾರ ನೀಡಲಾಗುವುದು. ಹೊಸದಾಗಿ ಕಿರು ಉದ್ದಿಮೆ ಆರಂಭಿಸುವವರಿಗೆ ಸಂಸ್ಕರಣೆಗೆ ಜಾಗ, ಪ್ರಯೋಗಾಲಯ ವ್ಯವಸ್ಥೆ ಹಾಗೂ ಬ್ಯಾಂಕ್ ಮೂಲಕ ಸಾಲ ಕೊಡಿಸಲಾಗುವುದು ಎಂದು ತಿಳಿಸಿದರು.

ಮಸಾಲೆ ಪದಾರ್ಥಗಳ ಸಂಶೋಧನೆಗೆ ಜಿಲ್ಲೆಯಲ್ಲಿ ಅವಕಾಶ ಇದೆ. ಅಣಬೆ ಹಾಗೂ ಬೇಕರಿ ಉದ್ಯಮದಲ್ಲಿ ಆಸಕ್ತಿ ಇರುವವರಿಗೆ ತರಬೇತಿ ನೀಡಲಾಗುತ್ತದೆ. ಚಾಕೊಲೇಟ್ ಉದ್ಯಮ ಮಾಡುವವರಿಗೂ ಪ್ರೋತ್ಸಾಹ ನೀಡಲಾಗುತ್ತದೆ. ಖಾದ್ಯಗಳಲ್ಲಿ ವಿಟಮಿನ್ ಮತ್ತು ಪ್ರೋಟೀನ್ ಮಟ್ಟ ಪರೀಕ್ಷೆ ಮಾಡಲಾಗುತ್ತದೆ. ತಾಂತ್ರಿಕ ತರಬೇತಿ ಹಾಗೂ ಖಾದ್ಯಗಳ ಪ್ಯಾಕಿಂಗ್‌ಗೂ ತರಬೇತಿ ನೀಡಲಾಗುವುದು ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್‌ಕುಮಾರ್, ಕೆಎಪಿಪಿಇಸಿ ಟೀಂ ಲೀಡರ್ ಅರವಿಂದ, ಲೀಡ್ ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ, ಜಿಪಂ ಉಪ ಕಾರ್ಯದರ್ಶಿ ಸುಜಾತಾ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ನಾಗರಾಜ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಬಾಬುರಾಮ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಶಿವಕುಮಾರ್ ಇತರರಿದ್ದರು.