ಮುಂಡಗೋಡ: ತಾಲೂಕಿನ ಸಾಲಗಾಂವ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮಂಗಳವಾರ ಕರೆದಿದ್ದ ಸಭೆಗೆ ಸದಸ್ಯರು ಹಾಜರಾಗದ ಕಾರಣ ಅವಿಶ್ವಾಸ ಗೊತ್ತುವಳಿ ನಡೆಯಲಿಲ್ಲ.
ಗ್ರಾಪಂನಲ್ಲಿ ಒಟ್ಟು 13 ಸದಸ್ಯರಿದ್ದಾರೆ. ಅಧ್ಯಕ್ಷ ಗಣಪತಿ ದೇವೆಂದ್ರಪ್ಪ ಬಾಳಮ್ಮನವರ ಹಾಗೂ ಉಪಾಧ್ಯಕ್ಷೆ ರೇಖಾ ಹರಿಜನ ಅವರು ಯಾವುದೇ ಅಭಿವೃದ್ಧಿ ಕೆಲಸ ಕೈಗೊಳ್ಳುವಾಗ ಪಂಚಾಯಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಅಲ್ಲದೆ ಮಹಿಳಾ ಸದಸ್ಯರಿಗೆ ಮಾಹಿತಿ ನೀಡದೆ ಕೆಲ ವಿಚಾರದಲ್ಲಿ ತಾವೇ ನಿರ್ಣಯ ಪಾಸು ಮಾಡುತ್ತಿದ್ದಾರೆ. ಏಕಪಕ್ಷೀಯ ನಿರ್ಣಯ ಕೈಗೊಂಡು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಹತ್ತು ಸದಸ್ಯರು ಜೂ. 26ರಂದು ಶಿರಸಿ ಉಪವಿಭಾಗಾಧಿಕಾರಿಗೆ ಅವರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಜು. 22ರಂದು ಅವಿಶ್ವಾಸ ಮಂಡನೆಗೆ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಅವರು ಸಭೆ ನಿಗದಿಪಡಿಸಿದ್ದರು. ಆದರೆ, ಸಭೆಗೆ ಸದಸ್ಯರು ಬಾರದ ಕಾರಣ ಒಂದು ತಾಸಿಗೂ ಅಧಿಕ ಸಮಯ ಕಾದು ಬಳಿಕ ಅಧಿಕಾರಿಗಳು ವಾಪಸಾದರು.
ಉಪವಿಭಾಗಾಧಿಕಾರಿ, ಕಂದಾಯ ಇಲಾಖೆಯ ರಾಘವೇಂದ್ರ ಗಿರೇಡ್ಡಿ, ನವಿನ ಕುಲಕರ್ಣಿ, ಪಿಡಿಒ ಗುರುರಾಜ ಇತರರಿದ್ದರು.