ಬೆಂಗಳೂರು: (Above-normal temperatures in North Karnataka) ದೇಶದಲ್ಲಿ ನೈಋತ್ಯ ಮಾನ್ಸೂನ್(ಮುಂಗಾರು) ಹಿಂಪಡೆಯುವ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ.
ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಗುರುವಾರ ಮಾನ್ಸೂನ್ ಹಿಂತೆಗೆದುಕೊಳ್ಳಲಾಗಿದೆ. ಇದರ ಬೆನ್ನಲ್ಲೇ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಕ್ಕಿಂತ 3 ಡಿ.ಸೆ.ನಿಂದ 6 ಡಿ.ಸೆ.ವರೆಗಿನ ಉಷ್ಣಾಂಶ ಅಧಿಕ ದಾಖಲಾಗಿ ಸುಡು ಬಿಸಿಲು ಕಾಣಿಸಿಕೊಳ್ಳುತ್ತಿದೆ.
ಪಶ್ಚಿಮ ರಾಜಸ್ಥಾನದಿಂದ ಮುಂಗಾರು ಹಿಂಪಡೆದ ಪ್ರಕ್ರಿಯೆ ಸೆ.19ರಿಂದ ಆರಂಭವಾಗಿತ್ತು. ಜಮ್ಮು- ಕಾಶ್ಮೀರ, ರಾಜಸ್ಥಾನ, ಪಂಜಾಬ್, ಉತ್ತರ ಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರ ಸೇರಿ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಹಂತ ಹಂತವಾಗಿ ಯಶಸ್ವಿಯಾಗಿ ಮಾನ್ಸೂನ್ ಹಿಂಪಡೆಯಲಾಗಿದೆ. ಅ.15ರ ವೇಳೆ ದೇಶಾದ್ಯಂತ ಮುಂಗಾರು ಕೊನೆಗೊಳ್ಳಲಿದೆ. ಅ.16ರಿಂದ ಹಿಂಗಾರು ಶುರುವಾಗಲಿದೆ ಎಂದು ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಹೇಳಿದ್ದಾರೆ.
ರಾಜ್ಯದಲ್ಲಿ ಮುಂದಿನ 3 ದಿನ ಮಳೆ ಸುರಿಯಲಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರದಲಿ ಅ.10ರಂದು ಗುಡುಗು ಸಹಿತ ಜೋರು ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ದಕ್ಷಿಣ ಕನ್ನಡ, ಉಡುಪಿಯಲ್ಲಿ ಮುಂದಿನ 3 ದಿನ, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ. ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ತುಮಕೂರು, ಶಿವಮೊಗ್ಗದಲ್ಲಿ ಅ.10, 11ರಂದು ಸಾಧಾರಣ ಮಳೆಯಾಗಲಿದೆ.ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.