ನವದೆಹಲಿ: ಕಾರ್ವಿುಕರ ಪಿಂಚಣಿ (ತಿದ್ದುಪಡಿ) ಯೋಜನೆ-2014 ಅನ್ನು ಶುಕ್ರವಾರ ಎತ್ತಿಹಿಡಿದ ಸುಪ್ರೀಂಕೋರ್ಟ್, ಈ ಯೋಜನೆಗೆ ಸೇರಲು ಗರಿಷ್ಠ 15,000 ರೂ. ಮಾಸಿಕ ವೇತನದ ಮಿತಿಯನ್ನು ರದ್ದು ಮಾಡಿದೆ. ಯೋಜನೆಯ ಕೆಲವು ನಿಬಂಧನೆಗಳನ್ನು ಸಡಿಲಿಸಿದ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ತ್ರಿಸದಸ್ಯ ಪೀಠ, ಈ ಯೋಜನೆಗೆ ಅರ್ಹರಾದ ನೌಕರರು ಗಡುವಿನೊಳಗೆ ಸೇರ್ಪಡೆ ಆಗಿರದಿದ್ದರೆ, ಅಂತಹವರಿಗೆ ಆರು ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಬೇಕು ಎಂದು ಸೂಚಿಸಿದೆ.
15,000 ರೂ.ಗಿಂತ ಹೆಚ್ಚಿನ ವೇತನದ ನೌಕರರು ಶೇ.1.16ರಷ್ಟು ಹೆಚ್ಚುವರಿ ಕಂತನ್ನು ಪಿಂಚಣಿ ಯೋಜನೆಗೆ ನೀಡಬೇಕು ಎಂಬ ಷರತ್ತನ್ನು ಪೀಠ ಅಮಾನ್ಯಗೊಳಿಸಿದೆ. ಈ ರೀತಿಯ ಷರತ್ತು ‘ಅಧಿಕಾರಕ್ಕೆ ಹೊರತಾದ ಕ್ರಮ’ ಎಂದು ಅಭಿಪ್ರಾಯಪಟ್ಟಿದೆ. ಆದರೆ, ನಿಧಿ ವ್ಯುತ್ಪತ್ತಿಗಾಗಿ ಈ ಆದೇಶವು ಆರು ತಿಂಗಳು ಅಮಾನತಿನಲ್ಲಿ ಇರಲಿದ್ದು, ನಂತರ ಜಾರಿಗೆ ಬರಲಿದೆ ಎಂದು ತಿಳಿಸಿದೆ. 2014ರ ಕಾರ್ವಿುಕರ ಪಿಂಚಣಿ ತಿದ್ದುಪಡಿ ಯೋಜನೆಯನ್ನು ರದ್ದು ಪಡಿಸಿದ ಕೇರಳ, ರಾಜಸ್ಥಾನ ಮತ್ತು ದೆಹಲಿ ಹೈಕೋರ್ಟ್ಗಳ ತೀರ್ಪನ್ನು ಪ್ರಶ್ನಿಸಿ ಕಾರ್ವಿುಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಮತ್ತು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದವು.
2014ರ ಪಿಂಚಣಿ ಯೋಜನೆಗೆ ಅರ್ಹರಾಗಬೇಕಾದರೆ ಗರಿಷ್ಠ 15,000 ರೂ. ಮಾಹೆಯಾನ (ಮೂಲವೇತನ ಮತ್ತು ತುಟ್ಟಿಭತ್ಯೆ ಸೇರಿ) ಸಂಬಳ ಇರಬೇಕು ಎಂದು ತಿದ್ದುಪಡಿ ಮಾಡಲಾಗಿತ್ತು. ತಿದ್ದುಪಡಿಗೂ ಮುನ್ನ ಮಾಸಿಕ ವೇತನದ ಮಿತಿ 6,500 ರೂ. ಇತ್ತು. ಈ ತಿದ್ದುಪಡಿಯು ಭವಿಷ್ಯ ನಿಧಿ ಸಂಸ್ಥೆಯ ವ್ಯಾಪ್ತಿಗೆ ಒಳಪಡದ 1300 ಸಂಸ್ಥೆಗಳ ಸಿಬ್ಬಂದಿಗೆ ಅನ್ವಯ ಮಾಡಲಾಗಿತ್ತು. ಉದ್ಯೋಗಿ ಮತ್ತು ಉದ್ಯೋಗದಾತರು ನೀಡುವ ತಲಾ ಶೇ.12ರಷ್ಟು ಪಿಎಫ್ ವಂತಿಗೆಯ ಪೈಕಿ ಉದ್ಯೋಗದಾತರ ಪಾಲಿನಲ್ಲಿ ಶೇ.8.33ರಷ್ಟು ಮೊತ್ತ ಕಾರ್ವಿುಕ ಪಿಂಚಣಿ ನಿಧಿಗೆ ವರ್ಗಾವಣೆ ಮಾಡುವ ನಿಯಮ 1995ರಲ್ಲಿ ಸೇರ್ಪಡೆಯಾಗಿದೆ.