ನ್ಯೂಸ್

ಅಬಕಾರಿ ಇಲಾಖೆಯಲ್ಲಿ ತಿಂಗಳ ಮಾಮೂಲಿ ವಸೂಲಿ; ಸಚಿವರ ವಿರುದ್ದವೇ ತಿರುಗಿಬಿದ್ದ ಆಡಳಿತ ಪಕ್ಷದ ಶಾಸಕ

Bengaluru - Political - Shivananda Tagadur

ಬೆಂಗಳೂರು:
ಮದ್ಯದಂಗಡಿಗಳಿಗೆ ಕಡಿವಾಣವೇ ಇಲ್ಲವಾಗಿದೆ. ಅಧಿಕಾರಿಗಳು ಮಾಮೂಲಿ ನಿಗಧಿಪಡಿಸಿಕೊಂಡು ವಸೂಲಿ ಮಾಡುವುದೇ ದಂಧೆಯಾಗಿ ಹೋಗಿದೆ ಎಂದು ಆಡಳಿತ ಪಕ್ಷದ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರು ಮೇಲ್ಮನೆಯಲ್ಲಿ ಸಕಾರದ ವಿರುದ್ದವೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಉತ್ತರ ನೀಡಲು ಮುಂದಾದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಪ್ರತಿ ತಾಲೂಕಿನಿಂದ ಇಷ್ಟು, ಜಿಲ್ಲೆಯಿಂದ ಇಂತಿಷ್ಟು ಎಂದು ಮಾಮೂಲಿ ಪಡೆಯುತ್ತಿದ್ದರೂ ಯಾಕೆ ಸುಮ್ಮನಿಡಿದ್ದೀರಿ ಎಂದು ಪ್ರಶ್ನಿಸಿದ ಅವರು, ನಮ್ಮ ಜಿಲ್ಲೆಯದನ್ನೆ ಉದಾಹರಣೆ ಕೊಡಲೇ ಎಂದು ಕೇಳಿದರು.
ಈ ಸದನದಲ್ಲಿ ಸುಮ್ಮನೆ ವಿಷಯ ಪ್ರಸ್ತಾಪ ಮಾಡುತ್ತಿಲ್ಲ. ನಾನು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುವುದಿಲ್ಲ. ಕೆಲಸಕ್ಕೆ ಸೇರಿದಂದಿನಿಂದ ಈತನಕ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ ಎಂದರೆ ಎಷ್ಟು ಪ್ರಭಾವಿಗಳು ನೋಡಿ ಎಂದು ಸದನದ ಗಮನ ಸೆಳೆದರು.
ಬಿಜೆಪಿ ಸದಸ್ಯ ಸುನೀಲ್ ವೆಲ್ಲಾಪುರಿ ಅವರು ಮಧ್ಯ ಪ್ರವೇಶಿಸಿ ಸಿಎಲ್ 7 ಲೈಸೆನ್ಸ್‌ನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದರು.
ನೀವು ಪ್ರಶ್ನೆ ಕೇಳುವುದನ್ನುಬಿಟ್ಟು, ಎಲ್ಲದನ್ನೂ ಇಲ್ಲಿಯೇ ಮಾತನಾಡಿದರೆ ಹೇಗೆ? ಎಂದು ಸಭಾಪತಿ ಕೇಳಿದರು.
ಉತ್ತರಿಸಿದ ಅಬಕಾರಿ ಸಚಿವ ತಿಮ್ಮಾಪುರ ಅವರು, ನಿರ್ದಿಷ್ಟ ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.