ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆ ಯಶಸ್ವಿಯಾಗಿದ್ದು, ಅಡೆ ತಡೆ ಇಲ್ಲದೆ ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊರುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ತಿಳಿಸಿದರು.
ಭಾನುವಾರ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆ ಯಶಸ್ವಿಯಾಗಿ ನಡೆಯಲು ಅಭಿಮನ್ಯು ಮತ್ತು ಹೆಣ್ಣಾನೆಗಳಾದ ಹಿರಣ್ಯಾ ಮತ್ತು ಲಕ್ಷ್ಮೀ ಮುಖ್ಯ ಕಾರಣ. ಜತೆಗೆ ಮಾವುತರು, ಕಾವಾಡಿಗಳು, ವಿಶೇಷ ಮಾವುತರು, ಆಹಾರ ತಂಡ ಸೇರಿದಂತೆ ಇಡೀ ನಮ್ಮ ತಂಡದ ಶ್ರಮವೂ ಕಾರಣ. ನಮ್ಮ ಸಿಬ್ಬಂದಿ ಎಲ್ಲರೂ ಅವರವರ ಕೆಲಸಗಳನ್ನು ತುಂಬ ಅಚ್ಚುಕಟ್ಟಾಗಿ ನಿರ್ವಹಿಸಿದರು. ಆದ್ದರಿಂದ ಮೆರವಣಿಗೆಯೂ ಯಶಸ್ವಿಯಾಯಿತು ಎಂದು ತಿಳಿಸಿದರು.
ಜಂಬೂ ಸವಾರಿಯ ಮೆರವಣಿಗೆ ಚಾಲೆಂಜಿಂಗ್ ಎನಿಸಿದರೂ ನಮ್ಮ ಸಿಬ್ಬಂದಿ ಉತ್ತಮವಾಗಿ ನಿರ್ವಹಿಸಿದರು. 25 ನಿಮಿಷದಲ್ಲಿ ಅಚ್ಚುಕಟ್ಟಾಗಿ ಅಂಬಾರಿ ಕಟ್ಟಲಾಯಿತು. ಹಾಗಾಗಿ, ಈ ಬಾರಿ ಮೆರವಣಿಗೆ ವೇಳೆ ಎಲ್ಲೂ ಅಂಬಾರಿ ವಾಲಲಿಲ್ಲ ಎನ್ನುವುದು ಖುಷಿ ವಿಚಾರ ಎಂದರು.
ಈ ಹಿಂದೆ ಕುಮ್ಕಿ ಆನೆಗಳಾಗಿ ಮೆರವಣಿಗೆಯಲ್ಲಿ ಭಾಗಿಯಾಗುತ್ತಿದ್ದ ಆನೆಗಳಿಗೆ ವಯಸ್ಸಾದ ಕಾರಣ ದಸರೆಗೆ ಕರೆ ತರಲಿಲ್ಲ. ಈ ಬಾರಿ ಹಿರಣ್ಯ ಮತ್ತು ಲಕ್ಷ್ಮೀ ಮೊದಲ ಬಾರಿಗೆ ಮೆರವಣಿಗೆಯಲ್ಲಿ ಕುಮ್ಕಿ ಆನೆಗಳಾಗಿ ಭಾಗವಹಿಸಿದ್ದವು. ಮೊದಲ ಬಾರಿಯಾದರೂ ಉತ್ತಮವಾಗಿ ನಮ್ಮ ಕೆಲಸವನ್ನು ನಿರ್ವಹಿಸಿದವು. ಹೊಸ ಆನೆಗಳನ್ನು ಕುಮ್ಕಿ ಆನೆ ಮಾಡುವುದು ಕೂಡ ನಮಗೆ ದೊಡ್ಡ ಚಾಲೆಂಜ್ ಆಗಿತ್ತು. ಆ ಆನೆಗಳ ಮಾವುತ ಮತ್ತು ಕಾವಾಡಿಗಳು ಈ ವಿಚಾರದಲ್ಲಿ ನಮಗೆ ಧೈರ್ಯ ತುಂಬಿದ್ದರು. ಅವರು ನೀಡಿದ್ದ ವಿಶ್ವಾಸದ ಮೇಲೆ ನಮ್ಮ ಇಡೀ ತಂಡ ಸೇರಿ ಕೆಲಸ ಮಾಡಿದವು. ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಎಲ್ಲ ಆನೆಗಳು ಕೂಡ ಉತ್ತಮ ರೀತಿಯಲ್ಲಿ ಸ್ಪಂದಿಸಿದ ಕಾರಣ ಉತ್ಸವ ಯಶಸ್ವಿಯಾಯಿತು. ಇದು ನಿಜಕ್ಕೂ ಖುಷಿಯ ವಿಚಾರವಾಗಿದೆ ಎಂದರು.
ಮೊದಲ ಬಾರಿಗೆ ದಸರಾ ಮಹೋತ್ಸವದ ಭಾಗಿಯಾಗಿ ಜಂಬೂ ಸವಾರಿಯನ್ನು ಯಶಸ್ವಿಗೊಳಿಸಿರುವುದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಇದೀಗ ದಸರಾ ಮುಗಿಯಿತಲ್ಲ ಎಂಬ ಬೇಸರವೂ ಆಯಿತು. ಎರಡು ತಿಂಗಳ ಕಾಲ ಆನೆಗಳು, ಮಾವುತ, ಕಾವಾಡಿಗಳ ಜೀವನ ಕ್ರಮದ ಜತೆ ಬೆರೆತಿದ್ದೆವು ಎಂದರು.
ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ ಲಕ್ಷಾಂತರ ಜನ ಸೇರಿದ್ದರು. 30ಕ್ಕೂ ಹೆಚ್ಚು ಸಾವಿರ ಜನ ಅರಮನೆ ಆವರಣದಲ್ಲೇ ನೆರೆದಿದ್ದರು. ಈ ಬಾರಿ ಹೆಚ್ಚುವರಿಯಾಗಿ ಅರಮನೆ ಅಂಗಳದಲ್ಲಿ 500 ಮೀಟರ್ ದೂರ ಮೆರವಣಿಗೆ ಹೋಗಬೇಕು ಎನ್ನುವುದು ಚಾಲೆಂಜ್ ಇತ್ತು. ನಮ್ಮ ಸಿಬ್ಬಂದಿ, ಕಾವಾಡಿಗಳು ಮತ್ತು ಮಾವುತರ ಎರಡು ತಿಂಗಳ ಪ್ರಯತ್ನದ ಫಲವಾಗಿ ಇದು ಸಾಧ್ಯವಾಯಿತು. ಇದಕ್ಕಾಗಿ ನಾವು ಪ್ರತಿದಿನ ಬೆಳಗ್ಗೆ, ಸಂಜೆ ತಾಲೀಮು ನಡೆಸುತ್ತಿದ್ದೆವು ಎಂದರು.
ಈ ಬಾರಿ ಧನಂಜಯ ಮತ್ತು ಪ್ರಶಾಂತ ಆನೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದವು. ಭಾರ ಹೊರುವ ತಾಲೀಮಿನಲ್ಲಿ ಅವುಗಳ ನಿರ್ವಹಣೆ ನೋಡಿ ಅಭಿಮನ್ಯು ಬದಲಿ ಆನೆಗಳಾಗಿ ಗುರುತಿಸಿದ್ದವು ಎಂದು ಮಾಹಿತಿ ನೀಡಿದರು.