ನ್ಯೂಸ್

ಕಲಾಂ ಹೆಸರಿನಲ್ಲಿ 12ರಂದು ಸಾಧಕ ಯುವ ಜನರಿಗೆ ಯುವ ಸ್ಟಾರ್ಟ್‌ಪ್ ಪ್ರಶಸ್ತಿ: ಜಮಾಲ್ ಸಿದ್ದಿಕಿ

ವಿಜಯವಾಣಿ ಸುದ್ದಿಜಾಲ, ಬೆಂಗಳೂರು

ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಮಹಾನ್ ರಾಷ್ಟ್ರವಾದಿಯಾಗಿದ್ದರು. ಅವರ ಹೆಸರಿನಲ್ಲಿ ಯೂತ್ ಸ್ಟಾರ್ಟ್ ಅಪ್ ಅವಾರ್ಡ್ ಸ್ಥಾಪನೆ ಮಾಡಲಾಗಿದ್ದು, ಆ.12ಕ್ಕೆ ದೆಹಲಿಯಲ್ಲಿ ಪ್ರದಾನ ಮಾಡಲಾಗುವುದು ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತರರಾಷ್ಟ್ರೀಯ ಯುವ ದಿನವಾದ ಅಂದು ದೆಹಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಲ್ಪಸಂಖ್ಯಾತ ಸಮುದಾಯದ ಸಾಧಕ ಯುವಜನರನ್ನು ಸನ್ಮಾನಿಸಸಲಾಗುವುದು ಎಂದರು.

ಕಲಾಂ ಅವರು ದೂರದೃಷ್ಟಿಯುಳ್ಳ ದಾರ್ಶನಿಕ ನಾಯಕರಾಗಿದ್ದರು. ಹಾಗಾಗಿಯೇ ಬಿಜೆಪಿ ಮತ್ತು ದೇಶದ ನಾಗರಿಕರ ಮನಸ್ಸಿನಲ್ಲಿ ಈಗಲೂ ಪ್ರಸ್ತುತರಾಗಿದ್ದಾರೆ ಎಂದು ತಿಳಿಸಿದರು.

ದೇಶದ ಭವಿಷ್ಯವೆನಿಸಿದ ಮಕ್ಕಳಿಗೆ ಶಿಕ್ಷಣ ನೀಡುವುದರಲ್ಲಿ ಕಲಾಂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಕಾಂಗ್ರೆಸ್ ಸೇರಿದಂತೆ ಇತರ ರಾಜಕೀಯ ಪಕ್ಷಗಳು ಕಲಾಂ ಅವರನ್ನು ಮರೆತಿವೆ. ಆದರೆ ಬಿಜೆಪಿ ಮರೆತಿಲ್ಲ ಎಂದು ಹೇಳಿದರು.

ಕಲಾಂ ಅವರು ದೇಶ ಜೋಡಣೆಯ, ವಿಕಸಿತ ಭಾರತದ ಮಾತನಾಡುತ್ತಿದ್ದರು. ಕಾಂಗ್ರೆಸ್ ಮತ್ತಿತರ ಪಕ್ಷಗಳು ದೇಶ ವಿಭಜಕರನ್ನು ನಾಯಕರಾಗಿ ನೋಡುತ್ತಿವೆ ಎಂದು ಟೀಕಿಸಿದರು.

ದೇಶದ ನಾಯಕರನ್ನು, ತ್ಯಾಗ, ಬಲಿದಾನ ಮಾಡಿದವರನ್ನು ಮತ್ತು ತಪಸ್ಸಿನಂತೆ ಸೇವೆ ಸಲ್ಲಿಸಿದವರನ್ನು ಯುವಜನರಿಗೆ ಪರಿಚಯಿಸುವ ಸಂಕಲ್ಪ ಬಿಜೆಪಿಯದು ಎಂದರು.

ಬಡ ಕುಟುಂಬದಲ್ಲಿ ಹುಟ್ಟಿದ ಡಾ.ಕಲಾಂ ವಿದ್ಯಾಭ್ಯಾಸದಿಂದ ಹಂತ ಹಂತವಾಗಿ ಮೇಲೇರಿ, ರಾಷ್ಟ್ರಪತಿಗಳ ಹುದ್ದೆಯನ್ನು ನಿಭಾಯಿಸಿದ್ದರು. ಅವರ ನೆನಪಿಗಾಗಿ ದೇಶಾದ್ಯಂತ ಕಲಾಂ ಕೋ ಸಲಾಂ ಕಾರ್ಯಕ್ರಮದ ಮೂಲಕ ದೇಶದ ಸಾಧಕ ಯುವ ಉದ್ಯಮಿಗಳಿಗೆ ಗೌರವ ನೀಡುತ್ತಿದ್ದೇವೆ. ಇದಕ್ಕಾಗಿ ಆನ್‌ಲೈನ್ ಫಾರ್ಮ್ ನೀಡಿದ್ದೇವೆ.ಬಿಜೆಪಿ ಮತ್ತು ಮೋರ್ಚಾದ ವೆಬ್ಸೈಟಿನಲ್ಲಿ ಈ ಫಾರ್ಮ್ ಲಭ್ಯವಿದೆ ಎಂದರು.

ಬೇಸರದ ಸಂಗತಿ:

ಪ್ರಧಾನಿ ಮೋದಿ ಅವರು ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ನಿತಿನ್ ಗಡ್ಕರಿಯವರು ಈಚೆಗೆ ರಸ್ತೆ ಉದ್ಘಾಟನೆಯಲ್ಲಿ ಭಾಗವಹಿಸಿದ್ದು, ಅದರಲ್ಲಿ ಮುಖ್ಯಮಂತ್ರಿಗಳು ಭಾಗವಹಿಸದಿರುವುದು ಬೇಸರದ ಸಂಗತಿ ಎಂದರು.

ಜಾತಿ ಗಣತಿ ಜಾರಿ ಮಾಡದ ಕಾಂಗ್ರೆಸ್:

ಹಿಂದೆ ಜಾತಿ ಗಣತಿ ಮಾಡಿದ್ದರೂ ಕಾಂಗ್ರೆಸ್ ಅದನ್ನು ಜಾರಿ ಮಾಡಲಿಲ್ಲ. ಇದೀಗ ಮತ್ತೆ ಹೊಸ ಜಾತಿ ಗಣತಿಗೆ ಮುಂದಾಗಿದೆ. ಅದನ್ನೂ ಕಸದ ಬುಟ್ಟಿಗೆ ಎಸೆಯುತ್ತಾರೆ ಎಂದು ಟೀಕಿಸಿದ ಅವರು,

ಕ್ರಿಶ್ಚಿಯನ್, ಮುಸಲ್ಮಾನರಲ್ಲೂ ಜಾತಿಗಳಿವೆ. ಅವನ್ನು ಗಣತಿ ವೇಳೆ ಪರಿಗಣಿಸುತ್ತಿಲ್ಲ ಎಂದು ಆಕ್ಷೇಪಿಸಿದರು.

ಕಾಂಗ್ರೆಸ್ ರಾಜಕೀಯ:

ವಕ್ಫ್ ವಿಷಯದಲ್ಲಿ ರಾಜ್ಯದಲ್ಲಿ ಎರಡು ತಂಡ ವರದಿ ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ, ವಕ್ಫ್ ಸಂಬಂಧ ಅನ್ವರ್ ಮಾಣಿಪ್ಪಾಡಿ ಅವರ ವರದಿ ಜಾರಿಗೆ ಕಾಂಗ್ರೆಸ್ ವಿರೋಧಿಸಿದ್ದಲ್ಲದೆ, ಅದರ ವಿರುದ್ಧ ಹೈಕೋರ್ಟಿನ ಮೆಟ್ಟಿಲೇರಿದ್ದು, ಅವರಲ್ಲಿನ ದ್ವಿಮುಖ ನೀತಿಗೆ ಹಿಡಿದ ಕನ್ನಡಿ ಎಂದರು,.

ಹಾಜರಿದ್ದವರು:

ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಅಧ್ಯಕ್ಷ ಡಾ. ಅನಿಲ್ ಥಾಮಸ್, ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಇಂದ್ರಕುಮಾರ್ ಜೈನ್, ಅಲ್ಪಸಂಖ್ಯಾತ ಮೋರ್ಚಾ ಸಾಮಾಜಿಕ ಜಾಲತಾಣ ರಾಷ್ಟ್ರೀಯ ಸಹ-ಸಂಚಾಲಕ ಜಸ್ವಂತ್ ಜೈನ್‌ಮತ್ತಿತರರು ಇದ್ದರು.