ನ್ಯೂಸ್

ಆರ್‌ಎಸ್‌ಎಸ್ ಕಾರ್ಯಕರ್ತರ ಸೋಗಿನಲ್ಲಿ ಗೋಮಾಂಸ ಸಾಗಾಟಗಾರನ ಅಪಹರಣ; ಪೊಲೀಸರಿಗೆ ಸೆರೆಸಿಕ್ಕವರು ಯಾರು..?

ಬೆಂಗಳೂರು: ಆರ್‌ಎಸ್‌ಎಸ್ ಕಾರ್ಯಾಕರ್ತರ ಸೋಗಿನಲ್ಲಿ ಮಾಂಸ ಪೂರೈಕೆದಾರನ ಅಪಹರಿಸಿ 10 ಸಾವಿರ ರೂ. ಸುಲಿಗೆ ಮಾಡಿದ್ದ ಮಾಂಸದಂಗಡಿ ಮಾಲೀಕ ಸೇರಿ ನಾಲ್ವರನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ಇಲಿಯಾಸ್‌ನಗರದ ಮಾಂಸದಂಗಡಿ ಮಾಲೀಕ ಮೊಹಮ್ಮದ್ ಮತ್ತು ಈತನ ಸಹಚರರಾದ ಮಧು, ದಿನೇಶ್, ಕಾರ್ತಿಕ್ ಬಂಧಿತರು. ರಾಮನಗರದಿಂದ ಮಾಂಸ ಪೂರೈಕೆ ಮಾಡುತ್ತಿದ್ದ ಜಾವೇದ್ ಬೇಗ್ ಎಂಬಾತನನ್ನು ಆರೋಪಿಗಳು ಅಪಹರಣ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಮನಗರದಿಂದ ಬೊಲೆರೊ ವಾಹನದಲ್ಲಿ ಗೋಮಾಂಸವನ್ನು ಆರೋಪಿ ಮೊಹಮ್ಮದ್ ಅಂಗಡಿಗೆ ಮಾಂಸ

ಪೂರೈಕೆ ಮಾಡುತ್ತಿದ್ದ. ಆದರೆ, ಅಂಗಡಿ ಮಾಲೀಕ ಸರಿಯಾಗಿ ಹಣ ಪಾವತಿ ಮಾಡುತ್ತಿರಲಿಲ್ಲ. ಸಾಲ ಕೂಡ ಮಾಡಿಕೊಂಡಿದ್ದ. ಇದರ ನಡುವೆ ಮಾಂಸವನ್ನು ಹೇಗಾದರೂ ಮಾಡಿ ದೋಚ ಬೇಕೆಂದು ಮೊಹಮ್ಮದ್ ತನ್ನ ಸಹಚರರ ಜತೆ ಚರ್ಚೆ ನಡೆಸಿ ಪ್ಲ್ಯಾನ್ ಮಾಡಿದ್ದ.

ಅದರಂತೆ ಸೆ.10ರಂದು ಮೊಹಮ್ಮದ್ ತನ್ನ ಕಾರಿನಲ್ಲಿ ಸಹಚರರೊಂದಿಗೆ ಜಾವೇದ್ ಬೇಗ್ ನ್ನು ಹಿಂಬಾಲಿಸಿದ್ದ. ಎಂದಿನಂತೆ ಜಾವೇದ್ ಬೇಗ್ , ರಾಮನಗರದಿಂದ ಕಾರಿನಲ್ಲಿ ಮಾಂಸ ತರುತ್ತಿದ್ದಾಗ ಮೈಕ್ರೋ ಲೇಔಟ್ ಸಿಗ್ನಲ್ ಬಳಿ ಆರೋಪಿಗಳು ಅಡ್ಡಗಟ್ಟಿ ಬೆದರಿಕೆ ಒಡ್ಡಿದ್ದರು.

ಮೊಹಮ್ಮದ್ ಮಾತ್ರ ಕಾರಿನಲ್ಲೇ ಕುಳಿತುಕೊಂಡಿದ್ದ. ಜಾವೇದ್ ಬೇಗ್ ಗೆ ‘ನೀನು ದನದ ಮಾಂಸ ಮಾರಾಟ ಮಾಡುತ್ತಿಯ, ನಾವು ಆರ್‌ಎಸ್‌ಎಸ್ ಕಾರ್ಯಕರ್ತರು ಪೊಲೀಸರಿಗೆ ಹಿಡಿದುಕೊಟ್ಟು ಕೇಸ್ ದಾಖಲಿಸುವುದಾಗಿ ಜಾವೇದ್ ಬೇಗ್ ಗೆ ಬೆದರಿಕೆ ಒಡ್ಡಿದ್ದರು.

ಬೊಲೆರೋದಲ್ಲಿ ಅಪಹರಣ ಮಾಡಿದ್ದರು. ಈ ಬಗ್ಗೆ ಪೊಲೀಸರಿಗೆ ಹೇಳಬಾರದು ಎಂದರೇ 1 ಲಕ್ಷ ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಕೊನೆಗೆ 10 ಸಾವಿರ ರೂ. ಸುಲಿಗೆ ಮಾಡಿ ಜಾವೇದ್ ಬೇಗ್ ನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಸೆಂಟ್ ಜಾನ್ ಸಿಗ್ನಲ್ ಬಳಿ ನಿನ್ನ ವಾಹನ ಇರುತ್ತದೆ ಎಂದು ಹೇಳಿ ಅಲ್ಲಿಂದ ಹೊರಟ್ಟಿದ್ದರು. ಅಲ್ಲಿಂದ ಮೊಹಮ್ಮದ್ ಅಂಗಡಿ ಬಳಿಗೆ ಬಂದು ಮಾಂಸವನ್ನು ಕೊಟ್ಟು ವಾಪಸ್ ಸೆಂಟ್ ಜಾನ್ ಸಿಗ್ನಲ್ ಸಮೀಪ ಬೊಲೊರೊ ಬಿಟ್ಟು ಹೋಗಿದ್ದರು.

ಜಾವೇದ್ ಬೇಗ್ ತನ್ನ ವಾಹನ ತೆಗೆದುಕೊಳ್ಳಲು ಹೋದಾಗ ಮಾಂಸ ಇರಲಿಲ್ಲ. ಈ ಬಗ್ಗೆ ಆಡುಗೋಡಿ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು, ಘಟನಾ ಸ್ಥಳದಲ್ಲಿ ಸಿಕ್ಕ ಸಿಸಿ ಕ್ಯಾಮರಾದೃಶ್ಯಾವಳಿ ಮತ್ತು ಇನ್ನಿತ್ತರ ಸಾಕ್ಷಾೃಧಾರಗಳ ಮೇಲೆ ತನಿಖೆ ನಡೆಸಿದಾಗ ಆರೋಪಿಗಳ ಸುಳಿವು ಲಭ್ಯವಾಗಿತ್ತು. ಮೊಹಮ್ಮದ್‌ನನ್ನು ಕರೆದು ವಿಚಾರಣೆ ನಡೆಸಿದಾಗ ಮಾಂಸ ನನ್ನ ಅಂಗಡಿಗೆ ಡಿಲವರಿ ಆಗಿಲ್ಲ ಎಂದು ಸಬೂಬು ಹೇಳಿದ್ದ. ಪೊಲೀಸರ ತನಿಖೆ ವೇಳೆ ಅಸಲಿ ಕಹಾನಿ ಬೆಳಕಿಗೆ ಬಂದಿದ್ದು, ಗೋಮಾಂಸ ಕಳ್ಳತನ ಆಗಿರುವುದು ಬೆಳಕಿಗೆ ಬಂದು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.