ಹರತಾಳು ಹಾಲಪ್ಪ 
ನ್ಯೂಸ್

ಅವೈಜ್ಞಾನಿಕ ಯೋಜನೆ ನಿರ್ಧಾರ ಕೈಬಿಡಿ

ಸೋಮಶೇಖರ ಎನ್

ಸಾಗರ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ರಾಜ್ಯ ಸರ್ಕಾರದ ನಿರ್ಧಾರ ಅವೈಜ್ಞಾನಿಕ. ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮಾಡಲು ಬಿಡುವುದಿಲ್ಲ. ಪರಿಸರ ಪರವಾದ ಪಕ್ಷಾತೀತ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.

ನಮ್ಮ ಭಾಗಕ್ಕೆ ನೀರಿಲ್ಲ. ಇರುವ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ನಿರ್ಧಾರಕ್ಕೆ ಬೆಂಬಲಿಸುವುದಿಲ್ಲ. ಲಿಂಗನಮಕ್ಕಿ ಅಣೆಕಟ್ಟಿನಿಂದ 40 ಟಿಎಂಸಿ ನೀರನ್ನು ಬೆಂಗಳೂರಿಗೆ ಒಯ್ಯಲು ಸರ್ವೇಗೆ 73 ಲಕ್ಷ ರೂ. ಮೀಸಲಿಡಲಾಗಿದೆ. ಸರ್ಕಾರ ತನ್ನ ನಿರ್ಧಾರ ಕೈಬಿಡಬೇಕು. ಇಲ್ಲವಾದಲ್ಲಿ ಹೋರಾಟದ ಹಾದಿ ಹಿಡಿಯುವುದು ನಿಶ್ಚಿತ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2019ರಲ್ಲಿ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ಯೋಜನೆ ಕುರಿತು ಬೆಂಗಳೂರು ನಗರಾಭಿವೃದ್ದಿ ಸಚಿವರಾಗಿದ್ದ ಡಾ. ಜಿ.ಪರಮೇಶ್ವರ್ ಆಸಕ್ತಿ ವಹಿಸಿದ್ದರು. ಆ ಸಂದರ್ಭದಲ್ಲಿ ನಾನು ಶಾಸಕನಾಗಿ ಯೋಜನೆ ವಿರೋಧಿಸಿ ಬೃಹತ್ ಪ್ರತಿಭಟನೆ ಜತೆಗೆ ಸಾಗರ ಬಂದ್ ಕೂಡ ನಡೆಸಲಾಗಿತ್ತು. ಮಠಾಧೀಶರು, ಪರಿಸರವಾದಿಗಳು, ಸಂಘಟನೆಗಳು ಬೆಂಬಲ ನೀಡಿದ್ದರಿಂದ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಸಾಧ್ಯವಾಗಿತ್ತು ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಯೋಜನೆ ಕೈಬಿಡುವಂತೆ ಮನವಿ ಮಾಡಿದಾಗ ಅವರು ಸ್ಪಂದಿಸಿದ್ದರು. ಇದೀಗ ಮತ್ತೊಮ್ಮೆ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಚಿಂತನೆ ನಡೆಯುತ್ತಿದೆ. ಸಂಘಟನೆಗಳು ಹೋರಾಟ ನಡೆಸಿದಲ್ಲಿ ಪಕ್ಷಾತೀತ ಬೆಂಬಲ ನೀಡಲಾಗುತ್ತದೆ. ನಮ್ಮ ಹಂತದಲ್ಲಿ ಹೋರಾಟ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು, ದೇವೇಂದ್ರಪ್ಪ ಯಲಕುಂದ್ಲಿ, ಕೆ.ಆರ್.ಗಣೇಶಪ್ರಸಾದ್, ಕೆ.ಸತೀಶ್, ಹರೀಶ್ ಮೂಡಳ್ಳಿ, ಸಂತೋಷ್ ಸುದ್ದಿಗೋಷ್ಠಿಯಲ್ಲಿದ್ದರು.