ಹುಣಸೂರು: ನಗರದ ಕಲ್ಪವೃತ್ತ ಸರ್ಕಲ್ ಬಳಿ ಎಐ ಸಿಸಿ ಕ್ಯಾಮರಾ ಅಳವಡಿಸಿ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುತ್ತಿರುವ ಪದ್ಧತಿಯನ್ನು ಕೈಬಿಡಲು ಆಗ್ರಹಿಸಿ ರೈತ ಸಂಘದ ಮುಖಂಡರು ಡಿವೈಎಸ್‌ಪಿ ಗೋಪಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ಮನವಿ ಸಲ್ಲಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಕಲ್ಪತರು ವೃತ್ತವಲ್ಲದೆ ಇತರ ಪ್ರಮುಖ ರಸ್ತೆಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಿ ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸಲಾಗುತ್ತಿದೆ. 40-50 ಸಾವಿರ ರೂ.ಗಳವರೆಗೆ ದಂಡ ಬಾಕಿಯಿದ್ದು, ರೈತ ಸಮುದಾಯ ಸಂಚಾರ ನಿಯಮ ಪಾಲನೆ ಮಾಡಲಾಗದ ಅನಿವಾರ್ಯ ಸ್ಥಿತಿಯೂ ಇದೆ. ನಿಯಮ ಪಾಲನೆ ಮಾಡಬಾರದೆಂಬ ವಾದ ನಮ್ಮದಲ್ಲವಾದರೂ ತರಕಾರಿ, ಹಣ್ಣು-ಹಂಪಲು ಸಾಗಿಸುವ ವೇಳೆ ಹೆಲ್ಮೆಟ್ ಧರಿಸುವಷ್ಟ ವ್ಯವಧಾನ ರೈತರಿಗಿರುವುದಿಲ್ಲ. ಅಷ್ಟಕ್ಕೂ ಸಿಸಿ ಕ್ಯಾಮರಾ ಅಳವಡಿಸಿದ್ದಾರೆನ್ನುವ ಪರಿವೇ ರೈತರಿಗಿರುವುದಿಲ್ಲ. ಹಾಗಾಗಿ ಸಿಸಿ ಕ್ಯಾಮರಾಗಳನ್ನು ತೆರವುಗೊಳಿಸಿ ಅಲ್ಲಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸುವ ಕಾರ್ಯ ಪೊಲೀಸ್ ಇಲಾಖೆ ನಡಸಬೇಕು. ಹುಣಸೂರು ನಗರದಾದ್ಯಂತ ಫುಟ್‌ಪಾತ್‌ಗಳು ಅತಿಕ್ರಮಣಗೊಂಡಿದ್ದು ತಳ್ಳುವ ಗಾಡಿಗಳಿಂದ ತುಂಬಿಹೋಗಿ ಪಾದಚಾರಿಗಳು ಮತ್ತು ವಾಹನ ಸವಾರರಿಗೆ ಸಂಚಾರ ಸವಾಲಾಗಿ ಪರಿಣಮಿಸಿದೆ. ಪೊಲೀಸ್ ಠಾಣೆ ಎದುರು ಕೂಡ ವಾಹನಗಳ ಜಮಾವಣೆಯಿಂದ ಪೊಲೀಸ್ ಠಾಣೆಗೆ ಬರಲಾಗದ ಪರಿಸ್ಥಿತಿ ಎದುರಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಅಧಿಕಾರಿಗಳು ಗಮನಿಸಿ ರೈತರ ಬೆಂಬಲಕ್ಕೆ ಬರಬೇಕೆಂದು ಒತ್ತಾಯಿಸಿದರು. ಮನವಿ ಸಲ್ಲಿಕೆ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಕಾರ್ಯದರ್ಶಿ ಅಗ್ರಹಾರ ರಾಮೇಗೌಡ ಇತರರು ಇದ್ದರು.
ಕಾನೂನು ಜಾರಿಯಾಗಿದೆ: ಈ ಕುರಿತು ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದ ಡಿವೈಎಸ್‌ಪಿ ಗೋಪಾಲಕೃಷ್ಣ, ಹೆಲ್ಮೆಟ್ ಕಡ್ಡಾಯ ಹಾಗೂ ಸೀಟ್‌ಬೆಲ್ಟ್ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಈಗಾಗಲೇ ವರ್ಷದ ಹಿಂದೆಯೇ ಕಾನೂನು ಜಾರಿಗೊಳಿಸಿದೆ. ಇದನ್ನು ರದ್ದುಪಡಿಸುವ ಅಥವಾ ಇನ್ಯಾವುದೇ ಕಾರ್ಯ ನಮ್ಮ ವ್ಯಾಪ್ತಿಗೆ ಮೀರಿದ್ದಾಗಿದೆ. ಆನ್‌ಲೈನ್ ಮೂಲಕ ದಂಡ ಪಾವತಿಗೆ ಅವಕಾಶ ಕಲ್ಪಿಸಿದ್ದು, ಇದೀಗ ಸರ್ಕಾರ ಶುಲ್ಕವನ್ನು ಶೇ.50ರಷ್ಟು ಕಡಿತಗೊಳಿಸಿದ್ದು, ಸಾರ್ವಜನಿಕರು ಅವಕಾಶವನ್ನು ಉಪಯೋಗಿಸಿಕೊಂಡು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಕೋರಿದರು.