ನವದೆಹಲಿ: ಕರೊನಾ ವೈರಸ್ನಿಂದ ನೀವೆಷ್ಟು ಸುರಕ್ಷಿತ ಎಂಬುದನ್ನು ತಿಳಿಸುವ ಆರೋಗ್ಯ ಸೇತು ಆಪ್ ಹೊಸ ದಾಖಲೆ ಬರೆದಿದೆ. 13 ದಿನಗಳಲ್ಲಿ 5 ಕೋಟಿ ಮೊಬೈಲ್ಗಳಲ್ಲಿ ಈ ಆಪ್ ಡೌನ್ಲೋಡ್ ಆಗಿದೆ. ಈ ಹಿಂದೆ 2016ರಲ್ಲಿ ಪೊಕೆಮಾನ್ ಗೋ ಆಪ್ ಮಾಡಿದ್ದ ದಾಖಲೆಯನ್ನು ಇದು ಮುರಿದು ಹಾಕಿದೆ.
ಪೊಕೆಮನ್ ಗೋ ಆಪ್ 19 ದಿನಗಳಲ್ಲಿ 5 ಕೋಟಿ ಡೌನ್ಲೋಡ್ ಆಗಿತ್ತು. ಪ್ಲೇ ಸ್ಟೋರ್ ಮತ್ತು ಗೂಗಲ್ ಸ್ಟೋರ್ನಲ್ಲಿ ಆರೋಗ್ಯ ಸೇತು ಆಪ್ ಲಭ್ಯವಿದ್ದು ಶೇ.99 ಡೌನ್ಲೋಡ್ ಪ್ಲೇಸ್ಟೋರ್ನಲ್ಲಾಗಿದೆ. ಪ್ರಧಾನಿ ಮೋದಿ ಮಂಗಳವಾರ ಬೆಳಗ್ಗೆ 10 ಗಂಟೆಗೆ ಮಾಡಿದ ಭಾಷಣದಲ್ಲಿ ಕರೊನಾ ವಿರುದ್ಧ ಹೋರಾಡುವುದಕ್ಕೆ ತಿಳಿಸಿದ ಸಪ್ತ ಸೂತ್ರಗಳಲ್ಲಿ ಆರೋಗ್ಯ ಸೇತು ಆಪ್ ಬಳಕೆ ಒಂದಾಗಿತ್ತು.
ಪ್ರಧಾನಿ ಭಾಷಣ ಪರಿಣಾಮ ಮಂಗಳವಾರ ಬೆಳಗ್ಗೆ ಪ್ರತಿ ನಿಮಿಷಕ್ಕೆ ಲಕ್ಷ ಸಂಖ್ಯೆಯಲ್ಲಿ ಈ ಆಪ್ ಡೌನ್ಲೋಡ್ ಆಗಿದೆ. ಉಳಿದ ಸಮಯದಲ್ಲಿ ನಿಮಿಷಕ್ಕೆ 1500-2000 ಸಂಖ್ಯೆಯಲ್ಲಿ ಡೌನ್ಲೋಡ್ ಆಗಿದೆ.
ದೋಣಿಗಳೇ ಐಸೋಲೇಷನ್ ವಾರ್ಡ್!
ಅಗತ್ಯವಿದ್ದಲ್ಲಿ ಕೇರಳದ ಆಲಪ್ಪುಳ ಜಿಲ್ಲೆಯಲ್ಲಿನ ದೋಣಿ ಮನೆಗಳನ್ನು ಐಸೋಲೇಷನ್ ವಾರ್ಡ್ ಗಳಾಗಿ ಪರಿವರ್ತಿಸುವುದಾಗಿ ಆಲಪ್ಪುಳ ಜಿಲ್ಲಾಧಿಕಾರಿ ಎಂ.ಅಂಜನಾ ತಿಳಿಸಿದ್ದಾರೆ. ಜಿಲ್ಲೆಯ ಸೋಂಕಿತರ ಸಂಖ್ಯೆ ತುಲಾನಾತ್ಮಕವಾಗಿ ಕಡಿಮೆ ಇದೆ. ಮೊದಲನೆ ಹಂತದಲ್ಲಿ ನಾವು ಕರೊನಾ ವಿರುದ್ಧ ಯಶಸ್ವಿಯಾಗಿ ಹೋರಾಡಿದ್ದೇವೆ. ಎರಡನೇ ಹಂತದಲ್ಲಿ ವಿಭಿನ್ನವಾಗಿ ಹೋರಾಡಲು ತಂತ್ರ ನಡೆಸಲಾಗುತ್ತಿದೆ. ಸಾಕಷ್ಟು ಸೌಲಭ್ಯ ನಮ್ಮಲ್ಲಿದೆ. ಒಂದು ವೇಳೆ ಸೌಲಭ್ಯ ಹೆಚ್ಚಿಸಿಕೊಳ್ಳುವ ಅಗತ್ಯತೆ ಬಂದರೆ ದೋಣಿ ಮನೆಗಳನ್ನು ಐಸೋಲೇಷನ್ ವಾರ್ಡ್ಗಳಾಗಿ ಮಾಡಲಾಗುವುದು. ದೋಣಿ ಮಾಲೀಕರ ಸಂಘದೊಂದಿಗೆ ಈ ಕುರಿತಾಗಿ ಚರ್ಚೆ ನಡೆಸಲಾಗಿದ್ದು ಅವರೆಲ್ಲರೂ ಇದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.