ನವದೆಹಲಿ: ದೆಹಲಿ ಹಿಂಸಾಚಾರದಲ್ಲಿ, ಗುಪ್ತಚರ ದಳ ಅಧಿಕಾರಿ ಅಂಕಿತ್ ಶರ್ಮಾ ಸಾವಿನಲ್ಲಿ ಪ್ರಮುಖವಾಗಿ ಕೇಳಿಬಂದ ಹೆಸರು ಆಪ್ ಕೌನ್ಸಿಲರ್ ಮಹಮ್ಮದ್ ತಾಹಿರ್ ಹುಸೇನ್ದು. ತಾಹೀರ್ ಮನೆಯ ಟೆರೇಸ್ ಮೇಲೆ ಕಲ್ಲು, ಪೆಟ್ರೋಲ್ ಬಾಂಬ್ಗಳು ಸೇರಿ ಹಲವು ಮಾರಕ ಅಸ್ತ್ರಗಳು ಪತ್ತೆಯಾಗಿದ್ದವು. ಇದೆಲ್ಲದರ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದಿಂದ ಅವರನ್ನು ಉಚ್ಚಾಟಿಸಲಾಗಿತ್ತು.
ತಮ್ಮ ಮಗನ ಸಾವಿನಲ್ಲಿ ತಾಹೀರ್ ಹುಸ್ಸೇನ್ ಕೈವಾಡವಿದೆ ಎಂದು ಅಂಕಿತ್ ಶರ್ಮಾ ತಂದೆ ರೋಹಿತ್ ಶರ್ಮಾ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ತಾಹಿರ್ ಹುಸೇನ್ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ಆದರೆ ತಾಹೀರ್ ಈಗ ನಾಪತ್ತೆಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ತಾಹಿರ್ ಹುಸೇನ್ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಅವರು ತಮ್ಮ ಕುಟುಂಬದ ಜತೆಯಲ್ಲೇ ಪರಾರಿಯಾಗಿದ್ದಾರೆ. ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡಿದ್ದಾರೆ. ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿ ಕೊನೇ ಬಾರಿ ಅವರು ತಮ್ಮ ಮೊಬೈಲ್ ಆಪರೇಟ್ ಮಾಡಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ದಯಾಳ್ಪುರ ಠಾಣೆಯಲ್ಲಿ ತಾಹೀರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಾಪತ್ತೆಯಾಗಿರುವ ತಾಹಿರ್ನನ್ನು ಭಯೋತ್ಪಾದನಾ ನಿಗ್ರಹ ದಳ, ಸ್ಪೆಷಲ್ ಸೆಲ್ ಸೇರಿ ಒಟ್ಟು ಐದು ಪೊಲೀಸ್ ತಂಡಗಳು ಹುಡುಕುತ್ತಿದ್ದು, ದೆಹಲಿ, ಉತ್ತರಪ್ರದೇಶ ಮತ್ತು ಸುತ್ತಲಿನ ರಾಜ್ಯಗಳ ಪ್ರಮುಖ ಅಡಗುತಾಣಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ದೆಹಲಿ ಪ್ರತಿಭಟನೆ ವೇಳೆ ಪೊಲೀಸರಿಗೆ ಗನ್ ತೋರಿಸಿದ ಶಾರುಖ್ನನ್ನೂ ಕೂಡ ಪೊಲೀಸರು ಹುಡುಕುತ್ತಿದ್ದಾರೆ. ಈತ ಮಾದಕವಸ್ತು ಮಾರಾಟದಲ್ಲಿ ತೊಡಗಿಕೊಂಡಿರುವ ಕುಟುಂಬಕ್ಕೆ ಸೇರಿದವ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)