ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ಗೆ ಪಾಕಿಸ್ತಾನದೊಂದಿಗೆ ಸಂಪರ್ಕವಿದೆ ಎಂಬಂತೆ ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಕೇಜ್ರಿವಾಲ್ ಉಗ್ರ ಎಂದಿದ್ದ ಬಿಜೆಪಿ ಸಂಸದ ಪರ್ವೇಶ್ ವರ್ಮಾ ವಿರುದ್ಧ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಕೇಜ್ರಿವಾಲ್ ಉಗ್ರ ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ಅರವಿಂದ ಕೇಜ್ರಿವಾಲ್ಗೆ ಪಾಕಿಸ್ತಾನದೊಂದಿಗೆ ನಿಕಟ ಸಂಪರ್ಕವಿದೆ ಎಂದು ಆರೋಪಿಸುತ್ತಾರೆ. ಉತ್ತರ ಪ್ರದೇಶದಲ್ಲಿ ಓರ್ವ ಮನೋರೋಗಿ ಇದ್ದಾರೆ. ಅವರನ್ನು ಜನರು ಯೋಗಿ ಬಾಬಾ ಎಂದು ಕರೆಯುತ್ತಾರೆ. ಆ ಮನೋರೋಗಿ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಅವಿವೇಕದ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ ಎಂದು ಯೋಗಿ ಆದಿತ್ಯನಾಥ್ ವಿರುದ್ಧ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ ದೆಹಲಿಯಲ್ಲಿ ಮನೋರೋಗಕ್ಕೆ ಚಿಕಿತ್ಸೆ ಕೊಡುವ ಸಾಕಷ್ಟು ಒಳ್ಳೆಯ ವೈದ್ಯರು ಇದ್ದಾರೆ. ಉತ್ತರಪ್ರದೇಶದಿಂದ ಅವರು ಬಂದರೆ ನಾವೇ ಉಚಿತವಾಗಿ ಚಿಕಿತ್ಸೆ ಕೊಡಿಸುತ್ತೇವೆ ಎಂದೂ ವ್ಯಂಗ್ಯವಾಡಿದ್ದಾರೆ.
ಇನ್ನು ಬಿಜೆಪಿಯ ಸ್ಟಾರ್ ಪ್ರಚಾರಕನಾಗಿದ್ದ ಪರ್ವೇಶ್ ವರ್ಮಾ ಅರವಿಂದ್ ಕೇಜ್ರಿವಾಲ್ ಅವರನ್ನು ಉಗ್ರ ಎಂದು ಕರೆದಿದ್ದರೂ ಚುನಾವಣಾ ಆಯೋಗ ಮೌನ ವಹಿಸಿದ್ದರ ಬಗ್ಗೆ ಅಚ್ಚರಿಯೆನಿಸುತ್ತಿದೆ. ಪರ್ವೇಶ್ ವರ್ಮಾಗೆ ಚುನಾವಣಾ ಪ್ರಚಾರದಿಂದ ನಿಷೇಧ ವಹಿಸಿ, ದೆಹಲಿಯಿಂದ ಹೊರಗೆ ಕಳಿಸಬೇಕು ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಉನ್ನಾವೋ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿ ಯೋಗಿ ವಿರುದ್ಧ ಆರೋಪ ಮಾಡಿದ್ದ ಸಂಜಯ್ ಸಿಂಗ್, ಯೋಗಿ ಆದಿತ್ಯನಾಥ್ಗೆ ತಮ್ಮ ರಾಜ್ಯದಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಕ್ರಮ ತೆಗೆದುಕೊಳ್ಳಲು, ಮಾತನಾಡಲು ಪುರುಸೊತ್ತಿಲ್ಲ. ಆದರೆ ಹಿಂದು-ಮುಸ್ಲಿಂ ವಿಚಾರದಲ್ಲಿ ಮಾತ್ರ ಮೂಗು ತೂರಿಸಿಕೊಂಡು ಬರುತ್ತಾರೆ ಎಂದು ಆರೋಪಿಸಿದ್ದರು.( ಏಜೆನ್ಸೀಸ್)