ನ್ಯೂಸ್

ಸ್ಥಾಯಿ ಸಮಿತಿ ಚುನಾವಣೆಗಳು ಅಸಂವಿಧಾನಿಕ; ಬಿಜೆಪಿ ವಿರುದ್ಧ ಸುಪ್ರೀಂ ಮೊರೆ ಹೋಗ್ತೇವೆ | CM Atishi

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮಹಾನಗರ ಪಾಲಿಕೆಯ (ಎಂಸಿಡಿ) ಸ್ಥಾಯಿ ಸಮಿತಿಯ ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ (ಎಎಪಿ) ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ಅತಿಶಿ(CM Atishi) ಶನಿವಾರ(ಸೆಪ್ಟೆಂಬರ್​ 28) ಹೇಳಿದ್ದಾರೆ. ಎಂಸಿಡಿಯ 18 ​​ಸದಸ್ಯರ ಸ್ಥಾಯಿ ಸಮಿತಿಯ ಕೊನೆಯ ತೆರವಾದ ಸ್ಥಾನವನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಶುಕ್ರವಾರ ಅವಿರೋಧವಾಗಿ ಗೆದ್ದಿದೆ. ಆದರೆ ಎಎಪಿ ಮತ್ತು ಕಾಂಗ್ರೆಸ್ ಕೌನ್ಸಿಲರ್‌ಗಳು ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.

ಬಿಜೆಪಿ ನಡೆಸಿರುವ ಎಂಸಿಡಿ ಚುನಾವಣೆಯು ಕಾನೂನುಬಾಹಿರ, ಅಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಇದರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇವೆ ಎಂದು ಸಿಎಂ ಅತಿಶಿ ಹೇಳಿದರು. ನಮ್ಮ ರಾಷ್ಟ್ರವು ಸಂವಿಧಾನದೊಂದಿಗೆ ಮತ್ತು ಸಂವಿಧಾನದಲ್ಲಿ ರೂಪಿಸಿರುವ ನಿಯಮಗಳೊಂದಿಗೆ ನಡೆಯುತ್ತದೆ. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಆಕ್ಟ್ 1957 ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಕಾರ್ಯವಿಧಾನ ಮತ್ತು ನಡವಳಿಕೆ ಮತ್ತು ವ್ಯವಹಾರ ನಿಯಮಗಳು 1958ರ ಅಡಿಯಲ್ಲಿ ಸ್ಥಾಯಿ ಸಮಿತಿಯ ಸದಸ್ಯರನ್ನು ಪಾಲಿಕೆ ಸಭೆಯಲ್ಲಿಯೇ ಆಯ್ಕೆ ಮಾಡಬೇಕು ಎಂದು ಅವರು ಹೇಳಿದರು.

ನಿಯಮಾನುಸಾರ ಪಾಲಿಕೆ ಸಭೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗುವುದು. ಪಾಲಿಕೆ ಸಭೆಯ ಸಮಯ, ಸ್ಥಳ ಮತ್ತು ದಿನಾಂಕವನ್ನು ನಿರ್ಧರಿಸುವುದು ಮೇಯರ್ ಅವರ ಏಕೈಕ ಅಧಿಕಾರವಾಗಿದೆ. ಪಾಲಿಕೆ ಸಭೆ ಯಾವಾಗ ನಡೆಯಲಿದೆ ಎಂಬುದನ್ನು ಮೇಯರ್ ಮಾತ್ರ ನಿರ್ಧರಿಸಬಹುದು. ಪಾಲಿಕೆಯ ಸಭೆ ನಡೆದಾಗಲೆಲ್ಲಾ ಅದರ ಅಧ್ಯಕ್ಷರು ಮೇಯರ್ ಅಥವಾ ಉಪಮೇಯರ್ ಆಗಿರುತ್ತಾರೆ ಎಂದು ಅತಿಶಿ ವಿವರಿಸಿದರು.

ಚುನಾವಣೆಗೆ ಕರೆಯುವ ಅಧಿಕಾರ ದೆಹಲಿ ಎಲ್‌ಜಿಗೆ ಅಧಿಕಾರವಿಲ್ಲದಿದ್ದರೂ ಆದೇಶವನ್ನು ನೀಡುತ್ತಾರೆ, ಆಯುಕ್ತರು, ಐಎಎಸ್ ಅಧಿಕಾರಿ ಆ ಆದೇಶವನ್ನು ಅನುಸರಿಸುತ್ತಾರೆ. ಲೆಫ್ಟಿನೆಂಟ್ ಗವರ್ನರ್ ಹಾಗೂ ಅಧಿಕಾರಿಗಳ ಅಧಿಕಾರ ದುರ್ಬಳಕೆ ಮಾಡಿಕೊಂಡು ಈ ಚುನಾವಣೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್​)