ನ್ಯೂಸ್

ತಿಹಾರ್ ಜೈಲಿನಲ್ಲಿ ದೆಹಲಿ ಸಿಎಂ; ಬಂಧನದ ಬಳಿಕ 4.5 ಕೆಜಿ ದೇಹದ ತೂಕ ಕಳೆದುಕೊಂಡ್ರಾ ಕೇಜ್ರಿವಾಲ್? ಎಎಪಿ ವಾದ!

ನವದೆಹಲಿ: ದೆಹಲಿ ಮದ್ಯ ನೀತಿ ಕೇಸ್​ನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಮಾ.21ರ ತಡರಾತ್ರಿ ಜಾರಿ ನಿರ್ದೇಶನಾಲಯ ಬಂಧಿಸಿತು. ಈ ಹಿನ್ನೆಲೆ ಇಡಿ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯನ್ನು ಸಹ ಕೇಜ್ರಿವಾಲ್​ ಹಿಂಪಡೆದಿದ್ದರು. ಇದೀಗ ತಿಹಾರ್​ ಜೈಲಿನಲ್ಲಿರುವ ದೆಹಲಿ ಸಿಎಂ ಬಂಧನದ ಬಳಿಕ 4.5 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಆಮ್​ ಆದ್ಮಿ ಪಕ್ಷ ಹೇಳಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಸ್ತುತ ಇರುವ ತಿಹಾರ್ ಜೈಲಿನ ಆಡಳಿತವು ಇಂದು ಅವರ ಕುರಿತು ಕೆಲವು ಮಾಹಿತಿಯನ್ನು ಬಹಿರಂಗಪಡಿಸಿದೆ. ಏಪ್ರಿಲ್ 1ರಂದು ಅವರನ್ನು ಜೈಲಿಗೆ ಕಳುಹಿಸಿದಾಗಿನಿಂದ ಪ್ರತಿದಿನ ಅಪ್ಡೇಟ್​ ಪಡೆಯುತ್ತಿರುವ ಅಧಿಕಾರಿಗಳು, ಇತ್ತೀಚೆಗೆ ಹೊರಡಿಸಿದ ಪ್ರಕಟಣೆಯಲ್ಲಿ ಕೇಜ್ರಿವಾಲ್ ಅವರ ದೇಹದ ತೂಕ ಜೈಲು ಸೇರಿದಾಗಿನಿಂದಲೂ ಬದಲಾಗಿಲ್ಲ. ಜೈಲಿನಲ್ಲಿದ್ದಾಗಿನಿಂದ 65 ಕೆಜಿ ತೂಕವನ್ನೇ ಹೊಂದಿದ್ದಾರೆ. ಅದರಲ್ಲಿ ಬದಲಾವಣೆ ಆಗಿಲ್ಲ ಎಂದಿದ್ದಾರೆ.

ಮಾರ್ಚ್ 21ರಂದು ಬಂಧಿಸಲ್ಪಟ್ಟ ನಂತರ 12 ದಿನಗಳಲ್ಲಿ ಸಿಎಂ ಕೇಜ್ರಿವಾಲ್​​ ಅವರು 4.5 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಎಎಪಿ ಸಚಿವ ಅತಿಶಿ ಹೇಳಿದ್ದಾರೆ. ಅವರ ಪ್ರಕಾರ, ಜಾರಿ ನಿರ್ದೇಶನಾಲಯವು ಅವರನ್ನು ಬಂಧಿಸಿದಾಗ ಎಎಪಿ ಮುಖ್ಯಸ್ಥರು 69.5 ಕೆಜಿ ತೂಕವಿದ್ದರು ಎಂದು ಹೇಳಲಾಗಿದೆ,(ಏಜೆನ್ಸೀಸ್).