ನ್ಯೂಸ್

ಕೇಜ್ರಿವಾಲ್​ ಮಾಜಿ ಆಪ್ತನಿಂದ ಆಮ್ಆದ್ಮಿ ಸಂಸದೆ ಮೇಲೆ ಹಲ್ಲೆ!

ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಆಮ್ಆದ್ಮಿ ಪಕ್ಷದ ನಾಯಕಿ ಮತ್ತು ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರಿಂದ ದೆಹಲಿ ಪೊಲೀಸರು ಸೋಮವಾರ ಕರೆ ಸ್ವೀಕರಿಸಿದ್ದಾರೆ.

ಕೇಜ್ರಿವಾಲ್ ಅವರ ಮಾಜಿ ಆಪ್ತ ಸಹಾಯಕ ಬಿಭವ್ ಕುಮಾರ್ ಅವರು ಸಿವಿಲ್ ಲೈನ್ಸ್‌ನಲ್ಲಿರುವ ಮುಖ್ಯಮಂತ್ರಿಯವರ ಅಧಿಕೃತ ನಿವಾಸದಲ್ಲಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ್ದಾರೆ.

ಮೇ 13(ಸೋಮವಾರ) ಬೆಳಗ್ಗೆ 10 ಗಂಟೆಗೆ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮಾಜಿ ಮುಖ್ಯಸ್ಥೆ ಮಲಿವಾಲ್ ಪಿಸಿಆರ್ ಕರೆಯನ್ನು ಮಾಡಿದ್ದಾರೆ. ಕರೆ ಸ್ವೀಕರಿಸಿದ ದೆಹಲಿ ಪೊಲೀಸರು ಮುಖ್ಯಮಂತ್ರಿ ನಿವಾಸಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಎಎಪಿ ವಿರುದ್ಧ ಬಿಜೆಪಿ ವಾಗ್ದಾಳಿ: ಎಎಪಿಯ ಮಲಿವಾಲ್ ಮಾಡಿರುವ ಆರೋಪಗಳಿಗೆ ಭಾರತೀಯ ಜನತಾ ಪಕ್ಷವು ಶೀಘ್ರವಾಗಿ ಪ್ರತಿಕ್ರಿಯಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ. ಬಿಜೆಪಿ ದೆಹಲಿ ಉಪಾಧ್ಯಕ್ಷ ಕಪಿಲ್ ಮಿಶ್ರಾ, “ಇದು ನಿಜವಾಗಿದ್ದರೆ, ದೇಶದ ಯಾವುದೇ ಸಿಎಂ ಮನೆಯಲ್ಲಿ ಇಂತಹ ದೊಡ್ಡ ಅಪರಾಧ ನಡೆದಿಲ್ಲ. ಮಲಿವಾಲ್ ಅವರನ್ನು ಥಳಿಸುವಂತೆ ಕೇಜ್ರಿವಾಲ್ ಅವರು ಕುಮಾರ್‌ಗೆ ಏಕೆ ಆದೇಶಿಸಿದರು? ಎಂದು ಪ್ರಶ್ನಿಸಿದೆ. ಆದರೆ ಆಮ್ ಆದ್ಮಿ ಪಕ್ಷ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.