ರಾಷ್ಟ್ರಪತಿ ದ್ರೌಪದಿ ಮುರ್ಮು ಜತೆ ಆಮಿರ್ ಖಾನ್
- ರಾಷ್ಟ್ರಪತಿ ದ್ರೌಪದಿ ಮುರ್ಮು ಜೀವನ ಕುರಿತ ಸಾಕ್ಷ್ಯ ಚಿತ್ರ
- ಒಡಿಸ್ಸಾದ ಹಳ್ಳಿಯಿಂದ ದಿಲ್ಲಿವರೆಗಿನ ಜೀವನದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ
- , ‘ರೂಬರೂ ರೋಶ್ನಿ’ ಡಾಕ್ಯುಮೆಂಟರಿ ಖ್ಯಾತಿಯ ಸ್ವಾತಿ ಚಕ್ರವರ್ತಿ ನಿರ್ದೇಶನ
ಪ್ರಧಾನಮಂತ್ರಿ, ರಾಷ್ಟ್ರಪತಿ ಹಾಗೂ ಹಿರಿಯ ರಾಜಕಾರಣಿಗಳ ಜೀವನ ಸಾಧನೆ ಕುರಿತು ಈಗಾಗಲೇ ಹಲವು ಸಿನಿಮಾ, ಡಾಕ್ಯುಮೆಂಟರಿಗಳು ಮೂಡಿಬಂದಿವೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನಾಧಾರಿತ ‘ಮೇ ಅಟಲ್ ಹೂ’, ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ‘ಪಿಎಂ ನರೇಂದ್ರ ಮೋದಿ’ ಹೀಗೆ ಸಿನಿಮಾಗಳು ಮೂಡಿಬಂದಿವೆ. ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜೀವನ ಸಾಧನೆ ಕುರಿತ ಡಾಕ್ಯುಮೆಂಟರಿ ನಿರ್ಮಾಣಕ್ಕೆ ಬಾಲಿವುಡ್ ಮುಂದಾಗಿದೆ. ನಟ, ನಿರ್ಮಾಪಕ ಆಮಿರ್ ಖಾನ್, ರಾಷ್ಟ್ರಪತಿ ಅವರ ಡಾಕ್ಯುಮೆಂಟರಿಗೆ ಆಸಕ್ತಿ ವಹಿಸಿದ್ದಾರೆ. ಒಡಿಶಾ ರಾಜ್ಯದ ಉರ್ಪಬೇಡಾ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ದ್ರೌಪದಿ ಮುರ್ಮು ಅವರು ಮುಂದೆ ಭಾರತದ ಪ್ರಥಮ ಪ್ರಜೆ ಎಂದು ಕರೆಯಲ್ಪಡುವ ರಾಷ್ಟ್ರಪತಿ ಹುದ್ದೆಯನ್ನು ಹೇಗೆ ಅಲಂಕರಿಸಿದರು? ಹಾಗೇ ಬುಡಕಟ್ಟು ಸಮುದಾಯದವರಾದ ಅವರು ಜೀವನದಲ್ಲಿ ಎದುರಿಸಿದ ಸವಾಲುಗಳ ಮೇಲೆ ಈ ಸಾಕ್ಷ್ಯಚಿತ್ರ ಬೆಳಕು ಚೆಲ್ಲಲಿದೆ. ಆಮಿರ್ ಖಾನ್ ಈ ಡಾಕ್ಯುಮೆಂಟರಿಯನ್ನು ನಿರ್ಮಿಸಲಿದ್ದು, ‘ರೂಬರೂ ರೋಶ್ನಿ’ ಡಾಕ್ಯುಮೆಂಟರಿ ಖ್ಯಾತಿಯ ಸ್ವಾತಿ ಚಕ್ರವರ್ತಿ ನಿರ್ದೇಶಿಸಲಿದ್ದಾರೆ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಆರಂಭಗೊಂಡಿದ್ದು, ರಾಷ್ಟ್ರಪತಿ ದ್ರೌಪದಿ ಅವರ ಆಪ್ತ ಬಳಗವನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿದುಬಂದಿದೆ. -ಏಜೆನ್ಸೀಸ್