ನ್ಯೂಸ್

ದಿಲ್ಲಿ ದಿಲ್​ ಗೆದ್ದ ಆಮ್​ ಆದ್ಮಿ; ಕುಸಿದು ನೆಲ ಕಚ್ಚಿದ ಕಾಂಗ್ರೆಸ್​

1998ರಿಂದ ದೆಹಲಿಯಲ್ಲಿ ಅಧಿಕಾರಕ್ಕೆ ಬರಲು ಹೆಣಗಾಡುತ್ತಿರುವ ಬಿಜೆಪಿಗೆ ಈ ಬಾರಿಯೂ ಭಾರೀ ನಿರಾಸೆ. ರಾಜಧಾನಿಯಲ್ಲಿ ಗೆಲುವಿನ ಹ್ಯಾಟ್ರಿಕ್ ಸಾಧನೆ ಮಾಡಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್, ರಾಷ್ಟ್ರೀಯ ಪಕ್ಷಗಳನ್ನು ಬದಿಗೆ ಸರಿಸಿ ತಮ್ಮ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೇರಿಸುವಲ್ಲಿ ಸಂಪೂರ್ಣ ಯಶಸ್ಸು ಸಾಧಿಸಿದ್ದಾರೆ.

5 ವರ್ಷಗಳ ಸದೃಢ ಆಡಳಿತ, ಶ್ರೀಸಾಮಾನ್ಯನಿಗೆ ಹತ್ತಿರವೆನಿಸಿದ ಯೋಜನೆಗಳು, ಆರೋಗ್ಯ-ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಳ್ಳುವ ಜತೆಗೆ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಯ ಪ್ರಚೋದನಕಾರಿ ತಂತ್ರಗಾರಿಕೆಗಳಿಗೆ ಮರುಳಾಗದೆ, ಹೇಳಿಕೆಗಳನ್ನು ನೀಡುವಲ್ಲಿ ಮಿತಿ ಕಾಯ್ದುಕೊಳ್ಳುವ ಚಾಣಾಕ್ಷ ತಂತ್ರ ಅನುಸರಿಸಿದ ಕೇಜ್ರಿವಾಲ್​ಗೆ ದೆಹಲಿ ಮತದಾರ ಜೈ ಎಂದಿದ್ದಾನೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ವರ್ಗೀಕರಿಸುವ ಮತದಾರರ ಮನದಾಳ ಮತ್ತೊಮ್ಮೆ ಸಾಬೀತಾಗಿದೆ.

ಸುಷ್ಮಾ ಸ್ವರಾಜ್ ಸಿಎಂ ಆಗಿದ್ದ ವೇಳೆ ಈರುಳ್ಳಿ ಮತ್ತು ತರಕಾರಿ ಬೆಲೆ ಏರಿಕೆ ಪರಿಣಾಮ ದಿಲ್ಲಿಯಲ್ಲಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿಗೆ ಕಳೆದ 22 ವರ್ಷಗಳಿಂದ ಮತ್ತೆ ಅಧಿಕಾರಕ್ಕೇರಲು ಸಾಧ್ಯವಾಗಿಲ್ಲ. 2013ರಲ್ಲಿ ಸರ್ಕಾರ ರಚನೆಗೆ ಸನಿಹವಾಗಿದ್ದರೂ ಪೂರ್ಣ ಬಹುಮತವಿರಲಿಲ್ಲ. 2015ರಿಂದ ಕೇಜ್ರಿವಾಲ್ ಆಡಳಿತ ಅಲೆಯಲ್ಲಿ ಬೀಗುತ್ತಿದ್ದ ಆಪ್​ನ್ನು ಮಣಿಸಿ ಅಧಿಕಾರ ಸ್ಥಾಪಿಸಬೇಕೆಂಬ ಹಾಲಿ ಪ್ರಯತ್ನವೂ ಕೈಗೂಡಿಲ್ಲ. ಮೋದಿ-ಅಮಿತ್ ಷಾ ಜೋಡಿಯ ತಂತ್ರಗಾರಿಕೆಗಳು ದಿಲ್ಲಿ ಮತದಾರನ ಮನಸ್ಸನ್ನು ಬದಲಿಸಿಲ್ಲ. ಈ ಫಲಿತಾಂಶದಿಂದಾಗಿ ದಿಲ್ಲಿಯಲ್ಲಿ ಬಿಜೆಪಿಯ ರಾಜಕೀಯ ವನವಾಸ 27 ವರ್ಷಗಳಿಗೆ ವಿಸ್ತರಣೆಗೊಳ್ಳಲಿದೆ. ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕೆ 11 ಮುಖ್ಯಮಂತ್ರಿಗಳು, 200 ಸಂಸದರು, ಹತ್ತಾರು ಕೇಂದ್ರ ಸಚಿವರು ಅಖಾಡಕ್ಕಿಳಿದಿದ್ದರು. ಗೃಹ ಸಚಿವ ಅಮಿತ್ ಷಾ 52 ರೋಡ್ ಶೋ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ 35ಕ್ಕಿಂತ ಹೆಚ್ಚು ಸಾರ್ವಜನಿಕ ಸಭೆಗಳನ್ನು ನಡೆಸಿದ್ದರು. ಕಳೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಮತ ಗಳಿಕೆ ಪ್ರಮಾಣ ಏರಿಕೆಯಾಗಿದ್ದರೂ, ಸೀಟುಗಳ ಸಂಖ್ಯೆ ಎರಡಂಕಿ ದಾಟಲಿಲ್ಲ.

ಸ್ಥಳೀಯ ನಾಯಕನಿಲ್ಲದ್ದೇ ಸಮಸ್ಯೆ: ವಿಧಾನಸಭೆ ಚುನಾವಣೆಗಳಲ್ಲಿ ಕೇಂದ್ರ ಸರ್ಕಾರದ ಸಾಧನೆ, ಪಕ್ಷದ ರಾಷ್ಟ್ರನಾಯಕರ ಮುಖ ನೋಡಿಕೊಂಡಷ್ಟೇ ಜನ ಮತ ಹಾಕಲಾರರು ಎಂಬ ಸ್ಪಷ್ಟ ಸಂದೇಶ ಫಲಿತಾಂಶದಿಂದ ಹೊರಬಿದ್ದಿದೆ. ಸ್ಥಳೀಯವಾಗಿ ದಿಟ್ಟ, ಸಮರ್ಥ, ವಿಶ್ವಾಸಾರ್ಹ ನಾಯಕನಿಲ್ಲದ್ದೇ ಬಿಜೆಪಿ ಮುಳುವಾಗಿ ಪರಿಣಮಿಸಿತು. ಸ್ಥಳೀಯ ನಾಯಕತ್ವವನ್ನು ಬೆಳೆಸುವ ಗಂಭೀರ ಯತ್ನವನ್ನೂ ಹೈಕಮಾಂಡ್ ಮಾಡಲಿಲ್ಲ. ಮನೋಜ್ ತಿವಾರಿ ದೆಹಲಿ ಬಿಜೆಪಿ ಅಧ್ಯಕ್ಷರಾಗಿದ್ದರೂ ಬಿಹಾರ ಮೂಲದ ಅವರನ್ನು ಒಪ್ಪುವ ಮನಸ್ಥಿತಿ ಸ್ಥಳೀಯ ಘಟಕದಲ್ಲೇ ಇರಲಿಲ್ಲ. ಮೇಲಾಗಿ, ಜನಸಮೂಹವನ್ನು ಸೆಳೆವ ಚರಿಷ್ಮಾ ಕೂಡ ತಿವಾರಿಯಲ್ಲಿ ಕಾಣಲಿಲ್ಲ. ‘ನಿಮಗೆ ಧೈರ್ಯವಿದ್ದರೆ ಸಿಎಂ ಅಭ್ಯರ್ಥಿ ಯಾರೆಂಬುದನ್ನು ಘೊಷಣೆ ಮಾಡಿ’ ಎಂದು ಚುನಾವಣಾ ಪ್ರಚಾರಗಳಲ್ಲಿ ಕೇಜ್ರಿವಾಲ್ ಬಿಜೆಪಿ ವರಿಷ್ಠರಿಗೆ ಪದೇಪದೇ ಸವಾಲು ಹಾಕುತ್ತಿದ್ದರು. ಆದರೆ ಬಿಜೆಪಿಯವರಲ್ಲಿ ಇದಕ್ಕೆ ಉತ್ತರವೇ ಇರಲಿಲ್ಲ.

ಧ್ರುವೀಕರಣಕ್ಕಿಲ್ಲ ಮಾನ್ಯತೆ: ಆಪ್ ವಿರೋಧಿಸಿ ಪ್ರಚಾರ ನಡೆಸಲು ಬಿಜೆಪಿಗೆ ಪ್ರಬಲ ಸ್ಥಳೀಯ ವಿಷಯಗಳಿರಲಿಲ್ಲ. ಸುಮಾರು 1400 ಅಕ್ರಮ ಕಾಲನಿಗಳನ್ನು ಸಕ್ರಮಗೊಳಿಸಿದರೂ ಕೇಜ್ರಿವಾಲ್ ಕೂಡ ಇದಕ್ಕಾಗಿ ಹೋರಾಡಿದ್ದು ದಿಲ್ಲಿ ಜನತೆಗೆ ಗೊತ್ತಿರದ ವಿಷಯವೇನಲ್ಲ. ಹೀಗಾಗಿ, ರಾಷ್ಟ್ರವಾದ, ದೇಶಭಕ್ತಿ ಹಾಗೂ ಹಿಂದುತ್ವದ ವಿಷಯಗಳನ್ನಿಟ್ಟುಕೊಂಡೇ ಆಪ್​ನ್ನು ಬದಿಗೆ ಸರಿಸಬೇಕೆಂಬ ಕಾರ್ಯತಂತ್ರಕ್ಕೆ ಬಿಜೆಪಿ ನಾಯಕರು ಮುಂದಾದರು.

ಸಂಸದರಾದ ಪ್ರವೇಶ್ ಸಿಂಗ್ ಸಾಹಿಬ್, ಅನುರಾಗ್ ಠಾಕೂರ್ ಹಿಂದು-ಮುಸ್ಲಿಂ ಕೋಮು ದ್ವೇಷ ಪ್ರಚೋದಿಸುವ ಹೇಳಿಕೆಗಳನ್ನು ನೀಡುತ್ತಾ ಧ್ರುವೀಕರಣಕ್ಕೆ ಕೈ ಹಾಕಿದರು. ‘ನೀವು ವೋಟ್ ಬಟನ್ ಒತ್ತುವ ತೀವ್ರತೆ ಶಹೀನ್ ಭಾಗ್​ನಲ್ಲಿ ವಿದ್ಯುತ್ ಶಾಕನ್ನು ಸೃಷ್ಟಿಸಬೇಕು’ ಎಂದು ಗೃಹ ಸಚಿವ ಅಮಿತ್ ಷಾ ಹೇಳಿದ್ದು ವ್ಯಾಪಕ ಟೀಕೆಗೆ ಗ್ರಾಸವಾಯಿತು. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಒಂದು ಹೆಜ್ಜೆ ಮುಂದೆ ಹೋಗಿ ಕೇಜ್ರಿವಾಲ್ ಭಯೋತ್ಪಾದಕ ಎಂದು ಕಿಡಿಕಾರಿದರು. ಇದರಿಂದ ಬೇಸರಗೊಂಡಿದ್ದ ಕೇಜ್ರಿವಾಲ್, ‘ನಾನು ನಿಮ್ಮ ಮನೆ ಮಗ. ನಿಮಗಾಗಿ ಕೆಲಸ ಮಾಡುವವನು. ನನ್ನನ್ನೇ ಉಗ್ರವಾದಿ ಎನ್ನುತ್ತಾರೆ’ ಎಂದು ಕಣ್ಣೀರು ಹಾಕಿ ಅನುಕಂಪ ಗಿಟ್ಟಿಸಿಕೊಂಡರು. ಕೇಜ್ರಿವಾಲ್ ಹಿಂದು-ವಿರೋಧಿ ಎಂದು ಬಿಂಬಿಸುವ ಬಿಜೆಪಿಯ ಯತ್ನಗಳೆಲ್ಲವೂ ಕೈಕೊಟ್ಟವು. ತಾನು ಹನುಮಂತನ ಭಕ್ತ ಎಂದು ತೋರಿಸಿಕೊಂಡ ಕೇಜ್ರಿವಾಲ್, ವಾಲ್ಮೀಕಿ ಮಂದಿರದಿಂದಲೇ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದ್ದರು. ಜನಸಾಮಾನ್ಯರ ಅಭಿವೃದ್ಧಿಗೆ ಶ್ರಮಿಸುವುದೇ ನಿಜವಾದ ರಾಷ್ಟ್ರವಾದ, ದೇಶಭಕ್ತಿ ಎಂದು ವಾದಿಸುತ್ತಲೇ ಬಿಜೆಪಿಗೆ ಠಕ್ಕರ್ ಕೊಟ್ಟರು.

ಮೋದಿ ನನ್ನ ಪ್ರಧಾನಿ ಎಂದಿದ್ದ ಕೇಜ್ರಿ

ವಿನಾಕಾರಣ ಪ್ರಧಾನಿ ಮೋದಿ ವಿರುದ್ಧ ಮಾತನಾಡಿದಷ್ಟು ಜನ ಆಕ್ರೋಶಗೊಳ್ಳುತ್ತಾರೆ ಎಂಬುದು ಅರಿವಾದ ಬಳಿಕ ಕೇಜ್ರಿವಾಲ್ ವರ್ತನೆಗಳಲ್ಲಿ ಆಮೂಲಾಗ್ರ ಬದಲಾವಣೆಯಾಯ್ತು. ಜಮ್ಮು-ಕಾಶ್ಮೀರ ವಿಶೇಷ ಸ್ಥಾನ ರದ್ದತಿಯನ್ನು ಬೆಂಬಲಿಸಿದ್ದ ಆಪ್, ಅಯೋಧ್ಯೆ ತೀರ್ಪನ್ನೂ ಒಪ್ಪಿಕೊಂಡಿತ್ತು. ದಿಲ್ಲಿ ಚುನಾವಣೆ ಹೊಸ್ತಿಲಲ್ಲಿ ಪಾಕಿಸ್ತಾನದ ಸಚಿವ ಫವಾದ್ ಹುಸೇನ್ ‘ಭಾರತೀಯರು ಮೋದಿಯನ್ನು ಸೋಲಿಸಬೇಕು’ ಎಂದು ಟ್ವೀಟ್ ಮಾಡಿದ್ದರು. ತಕ್ಷಣವೇ ಮೋದಿ ಬೆಂಬಲಿಸಿ ಟ್ವೀಟ್ ಮಾಡಿದ್ದ ಕೇಜ್ರಿವಾಲ್, ‘ಮೋದಿ ನನಗೂ ಪ್ರಧಾನಿ. ಭಯೋತ್ಪಾದನೆಯನ್ನು ಬೆಂಬಲಿಸುವವರು ನಮ್ಮ ದೇಶದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ. ನಮ್ಮ ಏಕತೆಗೆ ಭಂಗ ತರುವ ನಿಮ್ಮ ಯತ್ನ ಸಫಲವಾಗದು’ ಎಂದು ತಿರುಗೇಟು ನೀಡಿದ್ದರು. ಆಪ್ ಗೆಲುವಿನಲ್ಲಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಮತ್ತವರ ಪೊಲಿಟಿಕಲ್ ಆಕ್ಷನ್ ಕಮಿಟಿ ಮಹತ್ತರ ಪಾತ್ರ ವಹಿಸಿದ್ದು, ಸಾಮಾಜಿಕ ಜಾಲತಾಣಗಳ ಮುಖೇನ ಮತದಾರರ ಹೃದಯಕ್ಕೆ ಲಗ್ಗೆ ಹಾಕಿದ್ದರು. ದಿಲ್ಲಿಯಲ್ಲಿ ಸಿಸಿಟಿವಿ ಸರಿಯಿಲ್ಲ ಎಂದು ಟೀಕಿಸುತ್ತಿದ್ದ ಅಮಿತ್ ಷಾಗೆ ಅವರ ಚುನಾವಣಾ ಭಾಷಣ ಮೂರು ಸಿಟಿಟಿವಿಯಲ್ಲಿ ರೆಕಾರ್ಡ್ ಆಗಿದ್ದ ತುಣುಕನ್ನು ಟ್ವಿಟರ್​ನಲ್ಲಿ ಷೇರ್ ಮಾಡಿ ಕಾಲೆಳೆಯಲಾಗಿತ್ತು. ಇಂಥ ನಡೆಗಳ ಮೂಲಕ ಬಿಜೆಪಿಗೆ ತಿರುಗೇಟು ನೀಡಿದರು.

ರಾಷ್ಟ್ರಕ್ಕೆ ಮೋದಿ, ದಿಲ್ಲಿಗೆ ಕೇಜ್ರಿವಾಲ್!

2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಮತದಾರರು ಕೇಜ್ರಿವಾಲ್ ವಿರುದ್ಧವೇನೂ ಇರಲಿಲ್ಲ. ಆದರೆ, ‘ರಾಷ್ಟ್ರೀಯ ಚುನಾವಣೆ ಯಲ್ಲಿ ನಮ್ಮ ಮತ ಮೋದಿಗೆ, ಸ್ಥಳೀಯ ಚುನಾವಣೆಯಲ್ಲಿ ಕೇಜ್ರಿವಾಲ್​ಗೆ’ ಎಂದೇ ಮಾತನಾಡಿಕೊಳ್ಳುತ್ತಿದ್ದರು. ಹೀಗಾಗಿ, ಏಳೂ ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿತು. ಈ ವಿಧಾನಸಭೆ ಚುನಾವಣೆಯಲ್ಲೂ ಮತದಾರನಲ್ಲಿ ಅಂಥದ್ದೇ ಧೋರಣೆ ಕಂಡುಬಂತು. ‘ಕಳೆದೈದು ವರ್ಷಗಳಲ್ಲಿ ಕೇಜ್ರಿವಾಲ್ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು, ಪೌರತ್ವ ತಿದ್ದುಪಡಿ ಕಾನೂನಿನ ವಿಷಯಗಳು ನಮಗೆ ಇಲ್ಲಿ ಪ್ರಸ್ತುತವಲ್ಲ. ಸ್ಥಳೀಯವಾಗಿ ವಿದ್ಯುತ್, ನೀರು, ಆರೋಗ್ಯ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಆಪ್ ಸರ್ಕಾರದ ಜನೋಪಯೋಗಿ ಕಾರ್ಯಕ್ರಮಗಳನ್ನು ನೋಡಿಕೊಂಡೇ ಮತ ಹಾಕುತ್ತಿದ್ದೇವೆ. ಹಾಗೆಂದ ಮಾತ್ರಕ್ಕೆ ನಾವು ಮೋದಿ ವಿರೋಧಿಗಳಲ್ಲ. ದೇಶ ಕಟ್ಟುವ ಕೆಲಸದಲ್ಲಿ ಅವರಿಗೆ ನಮ್ಮ ಬೆಂಬಲವಿದೆ’ ಎಂದು ಬಹುಪಾಲು ಟ್ಯಾಕ್ಸಿ, ರಿಕ್ಷಾ ಚಾಲಕರು, ಬೀದಿ ಬದಿ ವ್ಯಾಪಾರಿಗಳು ಸೇರಿ ಮಧ್ಯಮ, ಕೆಳ ಮಧ್ಯಮ ವರ್ಗದ ಮಂದಿ ರ್ಚಚಿಸುತ್ತಿದ್ದರು. ಚುನಾವಣೆ ಫಲಿತಾಂಶದಲ್ಲೂ ಅದು ಪ್ರತಿಫಲಿಸಿದೆ.

ಬಿಜೆಪಿಗೆ ಸಂದೇಶವೇನು

ರಾಜಧಾನಿ ದೆಹಲಿ ಮಿನಿ ಭಾರತವಿದ್ದಂತೆ. ಇಲ್ಲಿ ಎಲ್ಲಾ ರಾಜ್ಯಗಳ ಜನರೂ ನೆಲೆ ಕಂಡುಕೊಂಡಿದ್ದಾರೆ. ವಲಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ. ಈ ಕಾರಣಕ್ಕಾಗಿಯೇ ದಿಲ್ಲಿಯಲ್ಲಿ ಕೋಮು ದ್ವೇಷ ಜ್ವಾಲೆಗಳು ವಿಸ್ತರಿಸಿಲ್ಲ. ಹೀಗಿರುವಾಗ ಚುನಾವಣೆಯಲ್ಲಿ ಹಿಂದು-ಮುಸ್ಲಿಂ ವಿಭಜನೆಯಂತಹ ವಿಷಯಗಳನ್ನಿಟ್ಟುಕೊಂಡು ಬಿಜೆಪಿ ಪ್ರಚಾರ ಮಾಡಿದ್ದು ಅನೇಕ ಪ್ರಜ್ಞಾವಂತ ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ. ದಿಲ್ಲಿಗೆ ದಿಲ್ಲಿಯ ವಿಷಯಗಳಷ್ಟೇ ಮುಖ್ಯ. ಮೂಲ ಸಮಸ್ಯೆಗಳನ್ನು ಹೊರತುಪಡಿಸಿ ಬೇರೆ ವಿಷಯಗಳನ್ನಿಟ್ಟುಕೊಂಡು ಮತ ಕೇಳಿದರೆ ಜನ ಒಪ್ಪುವುದಿಲ್ಲ ಎಂಬ ಸಂದೇಶವನ್ನು ಮತದಾರ ರವಾನೆ ಮಾಡಿದ್ದಾನೆ.

ಶೂನ್ಯಸಂಪಾದನೆಯೇ ಸಾಧನೆ

ಇಡೀ ಚುನಾವಣೆ ವೇಳೆ ಕಾಂಗ್ರೆಸ್​ನಲ್ಲಿ ಸಮರೋತ್ಸಾಹ ಕಾಣಲೇ ಇಲ್ಲ. ವಾಸ್ತವದಲ್ಲಿ ‘ಯುದ್ಧದ ದಿನಾಂಕ ಘೊಷಣೆ’ ಮುನ್ನವೇ ಕಾಂಗ್ರೆಸ್ ಶಸ್ತ್ರತ್ಯಾಗ ಮಾಡಿತ್ತು. ಸ್ಥಳೀಯ ನಾಯಕತ್ವದ ಕೊರತೆ, ಬಲಹೀನ ಸಂಘಟನೆಯನ್ನಿಟ್ಟುಕೊಂಡು ತಮ್ಮಿಂದ ದಿಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್ಸಿಗರಿಗೆ ಮೊದಲೇ ತಿಳಿದಿತ್ತು. ಹೀಗಾಗಿ, ತಾವು ಗೆಲ್ಲದಿದ್ದರೂ ಪರವಾಗಿಲ್ಲ, ಬಿಜೆಪಿ ಅಧಿಕಾರಕ್ಕೆ ಬರುವುದು ಬೇಡ ಎಂದೇ ಅನೇಕ ಕ್ಷೇತ್ರಗಳಲ್ಲಿ ದುರ್ಬಲ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ, ಆಮ್ ಆದ್ಮಿ ಪಕ್ಷದ ಗೆಲುವಿನ ಹಾದಿ ಸುಗಮಗೊಳ್ಳಲು ಕಾಂಗ್ರೆಸ್ ಪರೋಕ್ಷವಾಗಿ ನೆರವಾಯಿತು. ಕಾಂಗ್ರೆಸ್​ಗೆ ವೋಟು ಹಾಕಿ ಪ್ರಯೋಜನವಿಲ್ಲ ಎಂದು ಗೊತ್ತಾದ ಬಳಿಕ ಮುಸ್ಲಿಮರು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬಲ್ಲ ಆಪ್ ಅಭ್ಯರ್ಥಿ ಬೆಂಬಲಿಸಲು ನಿರ್ಧರಿಸಿದರು. ಒಟ್ಟಿನಲ್ಲಿ, 1998ರಿಂದ ಸತತ ಮೂರು ಬಾರಿ ಸರ್ಕಾರ ರಚಿಸಿದ್ದ ಕಾಂಗ್ರೆಸ್, 2015ರ ‘ಶೂನ್ಯ ಸಂಪಾದನೆಯ ಸಾಧನೆ’ಯನ್ನು 2020ರಲ್ಲೂ ಪುನರಾವರ್ತಿಸಿತು.

ಭವಿಷ್ಯದ ದೃಷ್ಟಿ?

ಕೇಜ್ರಿವಾಲ್ ಗೆಲುವು ಪ್ರಾದೇಶಿಕ ಪಕ್ಷಗಳಲ್ಲಿ ರಾಜಕೀಯ ಲವಲವಿಕೆ ಹೆಚ್ಚಿಸಿದೆ. ಆಪ್ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಬೇರೆ ರಾಜ್ಯಗಳ ವಿವಿಧ ಪ್ರಾದೇಶಿಕ ಪಕ್ಷಗಳೊಂದಿಗೆ ಉತ್ತಮ ಸಂಬಂಧ, ಸಂಪರ್ಕ ಸಾಧಿಸಿರುವುದರಿಂದ ಎನ್​ಡಿಎಗೆ ಪರ್ಯಾಯವಾಗಿ ತೃತೀಯ ರಂಗ ಕಟ್ಟಲು ಮುಂದಾದರೂ ಅಚ್ಚರಿ ಇಲ್ಲ. ವರ್ಷಾಂತ್ಯದಲ್ಲಿ ಬಿಹಾರ ಚುನಾವಣೆಯಿರುವುದರಿಂದ ಪ್ರಶಾಂತ್ ಕಿಶೋರ್ ನೇತೃತ್ವದಲ್ಲಿ ಆಪ್ ಬಿಹಾರ ಚುನಾ ವಣಾ ಕಣಕ್ಕೆ ಧುಮುಕುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ರಾಘವ ಶರ್ಮನಿಡ್ಲೆ ನವದೆಹಲಿ