ನವದೆಹಲಿ: ತಮಿಳುನಾಡಿನ ವ್ಯಾಲೆರಿ ಹೆಸರಿನ ಯುವತಿ ಲುಂಗಿ ಧರಿಸಿಕೊಂಡು ಲಂಡನ್‌ನಲ್ಲಿ ಬೀದಿ ಬೀದಿ ಸುತ್ತಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಹೆಮ್ಮೆಯಿಂದ ಪ್ರದರ್ಶಿಸಿದ್ದಕ್ಕಾಗಿ ನೆಟ್ಟಿಗರು ಆಕೆಯನ್ನು ಶ್ಲಾಘಿಸುತ್ತಿದ್ದಾರೆ.
ಅಂದಹಾಗೆ ವ್ಯಾಲೆರಿ ಬಹಳ ಸಮಯದಿಂದ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಆಕೆ ನೀಲಿ ಮತ್ತು ಬಿಳಿ ಬಣ್ಣದ ಲುಂಗಿಯನ್ನು ಉಟ್ಕೊಂಡು, ಟೀ ಶರ್ಟ್ ಮೇಲೆ ಶರ್ಟ್ ಧರಿಸಿ ಹಾಗೂ ಸನ್ಗ್ಲಾಸ್ ಹಾಕ್ಕೊಂಡು ಲಂಡನ್ ಬೀದಿಯಲ್ಲಿ ಅಡ್ಡಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಲಂಡನ್ನ ಸೂಪರ್ ಮಾರ್ಕೆಟ್ಗೂ ಅದೇ ಅವತಾರದಲ್ಲಿ ವ್ಯಾಲೆರಿ ಹೋಗಿದ್ದು, ಆಕೆಯನ್ನು ನೋಡಿದ ಸ್ಥಳೀಯರು ಒಂದು ಕ್ಷಣ ತಮ್ಮ ಹುಬ್ಬೇರಿಸಿದ್ದಾರೆ.
ಲುಂಗಿಯಲ್ಲಿ ವ್ಯಾಲೆರಿಯನ್ನು ಕಂಡು ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಅವಳನ್ನು ನೋಡಿ ನಕ್ಕಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ತಿಳಿಸಲು ಈ ವಿಡಿಯೋ ಉತ್ತಮ ಮಾರ್ಗವಾಗಿದೆ ಎಂದು ಅನೇಕ ನೆಟ್ಟಿಗರು ಬಹುಪರಾಕ್ ಹೇಳಿದ್ದಾರೆ. ವ್ಯಾಲೆರಿ ತನ್ನ ಇನ್ಸ್ಟಾಗ್ರಾಂ ಪೇಜ್ನಲ್ಲಿ ವಿಡಿಯೋ ಪೋಸ್ಟ್ ಮಾಡಿದ ಕೂಡಲೇ ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಲ್ಲಿಯವರೆಗೆ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ ಮತ್ತು 1 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.
ನೆಟ್ಟಿಗರೊಬ್ಬರು "ವಾವ್ ಇದು ಅದು ಅದ್ಭುತವಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ. "ಅಕ್ಕ, ನೀನಗೊಂದು ಸಲ್ಯೂಟ್ ಮಾಡಬೇಕು. ನಿಜಕ್ಕೂ ಇದು ನನಗೆ ಇಷ್ಟವಾಯಿತು ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ. ಲಂಡನ್‌ನಲ್ಲಿ ಲುಂಗಿ ಹಾಕಿಕೊಂಡು ಕುಣಿದು ಕುಪ್ಪಳಿಸುವುದು ಅಪರೂಪವಾದ್ದರಿಂದ ವ್ಯಾಲೆರಿಯ ಅದ್ಭುತ ನೃತ್ಯಕ್ಕೆ ಪ್ರೇಕ್ಷಕರು ಮರುಳಾಗಿದ್ದಾರೆ. (ಏಜೆನ್ಸೀಸ್)