ಬೆಂಗಳೂರು: ಮದುವೆಗೆ ಅಡ್ಡಿಪಡಿಸಿದಳು ಎಂಬ ಕಾರಣಕ್ಕೆ ಮಹಿಳಾ ಪೇಯಿಂಗ್ ಗೆಸ್ಟ್‌ಗೆ ನುಗ್ಗಿ ಪ್ರೇಯಸಿಯ ಸ್ನೇಹಿತೆ ಕತ್ತು ಕೊಯ್ದು ದುಷ್ಕರ್ಮಿ ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಕೋರಮಂಗಲದ ವಿ.ಆರ್. ಲೇಔಟ್ ನಿವಾಸಿ ಕೃತಿ ಕುಮಾರಿ (24) ಕೊಲೆಯಾದ ಯುವತಿ. ಮಂಗಳವಾರ ತಡರಾತ್ರಿ 11.30ರಲ್ಲಿ ಮೃತಳ ಸ್ನೇಹಿತೆಯ ಪ್ರಿಯಕರನೇ ಕೃತ್ಯ ಎಸಗಿರುವ ಶಂಕೆ ಇದ್ದು, ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರ ಮೂಲದ ಕೃತಿ ಕುಮಾರಿ, 4-5 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಖಾಸಗಿ ಕಾಲೇಜಿನಲ್ಲಿ ಎಂಬಿಎ ಪದವಿ ಮುಗಿಸಿದ್ದರು. ಕೆಲ ತಿಂಗಳಿಂದ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಮಧ್ಯಪ್ರದೇಶ ಮೂಲದ ಸಹೋದ್ಯೋಗಿ ಯುವತಿಯ ಪರಿಚಯವಾಗಿ ಇಬ್ಬರೂ ಕೆಲ ದಿನಗಳ ಹಿಂದಷ್ಟೇ ವಿ.ಆರ್. ಲೇಔಟ್‌ನಲ್ಲಿರುವ ಪಿಜಿಗೆ ಬಂದು ವಾಸವಾಗಿದ್ದರು. ಇಲ್ಲಿಂದಲೇ ಕೆಲಸಕ್ಕೆ ಹೋಗಿ ಬರುತ್ತಿದ್ದರು.
ಮಧ್ಯಪ್ರದೇಶ ಮೂಲದ ಯುವತಿಯ ಪ್ರಿಯಕರ ಪೇಯಿಂಗ್ ಗೆಸ್ಟ್‌ಗೆ ಬಂದು ಹೋಗುತ್ತಿದ್ದ. ಮಹಿಳಾ ಸೆಕ್ಯೂರಿಟಿ ಗಾರ್ಡ್, ಒಳ ಪ್ರವೇಶಕ್ಕೆ ಬಿಡದೆ ಇದ್ದಾಗ ಪ್ರೇಯಸಿ ‘ಪರಿಚಯಸ್ಥ ಲಗೇಜ್ ಒಳಗಡೆ ಇಟ್ಟು ಹೋಗುತ್ತಾನೆ. ಬೇಗನೆ ವಾಪಸ್ ಕಳುಹಿಸುತ್ತೇನೆ’ ಎಂದು ಸಬೂಬು ಹೇಳಿ ಒಳಗಡೆ ಕರೆಸಿಕೊಳ್ಳುತ್ತಿದ್ದಳು. ಒಳಗೆ ಬಂದು ಹೋಗಿರುವ ದೃಶ್ಯಗಳು ಪಿಜಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಆರೋಪಿ ಮತ್ತು ಆತನ ಪ್ರೇಯಸಿ ಕುಟುಂಬ ಸದಸ್ಯರಿಗೆ ಒಪ್ಪಿಸಿ ಮದುವೆ ಆಗಬೇಕೆಂದು ನಿರ್ಧರಿಸಿದ್ದರು. ಆರೋಪಿ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ತನ್ನ ಪ್ರೇಯಸಿಯಿಂದಲೇ ಹಣ ಪಡೆಯುತ್ತಿದ್ದ. ಕೆಲ ದಿನಗಳ ಹಿಂದೆಯಷ್ಟೇ ಪಿಜಿ ಸಮೀಪದಲ್ಲಿ ಇಬ್ಬರಿಗೂ ಜಗಳವಾಗಿತ್ತು. ಸ್ಥಳದಲ್ಲಿದ್ದ ಕೃತಿ ಕುಮಾರಿ ಜಗಳ ಬಿಡಿಸಿದ್ದಳು. ಅಸಭ್ಯ ವರ್ತನೆ ತೋರುವ ಯುವಕನ ಜೊತೆಗೆ ಮದುವೆ ಆಗದಂತೆ ಸ್ನೇಹಿತೆಗೆ ಕೃತಿ ಕುಮಾರಿ ಸಲಹೆ ನೀಡಿದ್ದಳು.
ವಿಚಾರ ತಿಳಿದ ಆರೋಪಿ, ಕೃತಿ ಕುಮಾರಿ ಕೊಲೆಗೆ ನಿರ್ಧರಿಸಿದ್ದ. ಮಂಗಳವಾರ ರಾತ್ರಿ ಪಾಳಿಯಲ್ಲಿದ್ದ ಮಹಿಳಾ ಸೆಕ್ಯೂರಿಟಿ ಗಾರ್ಡ್, 11 ಗಂಟೆಗೆ ಊಟಕ್ಕೆಂದು ಪಿಜಿಯ 2ನೇ ಮಹಡಿಯಲ್ಲಿರುವ ಅಡುಗೆ ಕೋಣೆಗೆ ಹೋಗಿದ್ದಾರೆ. ಆ ಸಮಯಕ್ಕಾಗಿ ಕಾಯುತ್ತಿದ್ದ ಆರೋಪಿ, ಪಿಜಿಗೆ ನುಗ್ಗಿ 11.30ರಲ್ಲಿ 3ನೇ ಮಹಡಿಯಲ್ಲಿರುವ ಕೃತಿ ಕುಮಾರಿ ಕೋಣೆಗೆ ಹೋಗಿ ಕೃತಿ ಕತ್ತನ್ನು ಎರಡ್ಮೂರು ಬಾರಿ ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಆರೋಪಿಯ ಪ್ರೇಯಸಿ ಪಿಜಿಯಲ್ಲಿ ಇರಲಿಲ್ಲ ಎಂಬುದು ಗೊತ್ತಾಗಿದೆ. ಸದ್ಯ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಮತ್ತೊಂದೆಡೆ ಆರೋಪಿ ಪಿಜಿಯೊಳಗೆ ನುಗ್ಗುವುದು ಮತ್ತು ಕೃತ್ಯ ಎಸಗಿ ವಾಪಸ್ ಪಿಜಿಯಿಂದ ಹೊರ ಹೋಗುತ್ತಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಆಧಾರದ ಮೇಲೆ ಆರೋಪಿ ಪತ್ತೆಗಾಗಿ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ರಮಣ ಗುಪ್ತಾ, ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮಾ ಭೇಟಿ ನೀಡಿ ಪರಿಶೀಲಿಸಿದ್ದಾರೆ.