ನ್ಯೂಸ್

ನಾಯಿ ಬೊಗಳಿದ್ದಕ್ಕೆ ಯುವತಿಯನ್ನು ಎಳೆದಾಡಿ ಹಲ್ಲೆ

ಬೆಂಗಳೂರು: ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಅವರ ಮಗಳನ್ನು ಎಳೆದಾಡಿ ಹಲ್ಲೆ ಮಾಡಿದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಿಹಾರಿ ಮೂಲದ ಶಂಕರ್ ಬಂಧಿತ ಆರೋಪಿ. ಶಾಲಿನಿ ಎಂಬ ಯುವತಿ ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಪಟ್ಟೇಗಾರ ಪಾಳ್ಯದ ಮುನೇಶ್ವರ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದನು. ಈತನ ಜತೆ ನಾಲ್ಕೈದು ಮಂದಿ ವಾಸವಿದ್ದರು. ಟೈಲ್ಸ್ ಹಾಕುವ ಕೆಲಸಮಾಡಿಕೊಂಡಿದ್ದ ಆರೋಪಿ ಶಂಕರ್, ಮಾ.೭ ರಂದು ರಾತ್ರಿ ೧೦.೩೦ರ ಸುಮಾರಿನಲ್ಲಿ ತನ್ನ ಸ್ನೇಹಿತರನ್ನು ಕರೆದುಕೊಂಡು ತನ್ನ ಮನೆ ಬಳಿ ಬಂದಿದ್ದಾನೆ. ಆ ಸಂದರ್ಭದಲ್ಲಿ ಪಕ್ಕದ ಮನೆಯ ನಾಯಿ ಬೊಗಳುತ್ತಿದ್ದಾಗ, ಶಂಕರ್ ಹಾಗೂ ಆತನ ಸ್ನೇಹಿತರು ನಾಯಿಗೆ ಹೊಡೆದಿದ್ದಾರೆ. ನಾಯಿ ಸಾಕಿದ್ದ ಮನೆ ಮಾಲೀಕರು ಹೊರಗೆ ಬಂದು ಯಾಕಪ್ಪಾ ಹೀಗೆ ಕೂಗಾಡುತ್ತಿದ್ದಿರಾ ಎಂದು ಕೇಳುತ್ತಿದ್ದಂತೆ, ಅವರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಅಪ್ಪನ ರಕ್ಷಣೆಗೆ ಬಂದ ಎರಡನೇ ವರ್ಷದ ಬಿ.ಕಾಂ ವ್ಯಾಸಾಂಗ ಮಾಡುತ್ತಿರುವ ಮಗಳನ್ನು ಶಂಕರ್ ಗುಂಪು ಎಳೆದಾಡಿದೆ. ಈ ಘಟನೆ ಬಗ್ಗೆ ವಿದ್ಯಾರ್ಥಿನಿ ಮಹಿಳಾ ಆಯೋಗದ ಅಧ್ಯಕ್ಷರಿಗೆ ವಿಡಿಯೋ ಕಳುಹಿಸಿ, ನ್ಯಾಯ ಕೊಡಿಸುವಂತೆ ಸಂದೇಶ ಕಳುಹಿಸಿದ್ದರು. ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿ ಶಂಕರ್‌ನನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.