ನ್ಯೂಸ್

ಕಾರು ಡಿಕ್ಕಿಯಾಗಿ ಯುವತಿ ಸ್ಥಳದಲ್ಲೇ ಸಾವು

ತಿ.ನರಸೀಪುರ: ಪಟ್ಟಣದ ಕೊಳ್ಳೇಗಾಲ-ಮೈಸೂರು ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗೆ ಕಾರು ಡಿಕ್ಕಿಯಾಗಿ ಯುವತಿ ಸ್ಥಳದಲ್ಲೇ ಮೃತಪಟ್ಟು, ಕೂಲಿ ಕಾರ್ಮಿಕನೊಬ್ಬ ಗಾಯಗೊಂಡಿದ್ದಾನೆ.
ಪಟ್ಟಣದ ಪುರಸಭೆ ವ್ಯಾಪ್ತಿಯ ಆಲಗೂಡು ಗ್ರಾಮದ ರಾಜೇಶ್ ಅವರ ಪುತ್ರಿ ಆರ್.ಜಯಂತಿ(18) ಮೃತಳು. ಅದೇ ಗ್ರಾಮದ ಜಯರಾಮ(48) ಗಂಭೀರ ಗಾಯಗೊಂಡಿದ್ದಾರೆ. ಪಟ್ಟಣದ ಗೌರಿ ಶಂಕರ್ ಟೆಕ್ಸ್‌ಟೈಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಆಲಗೂಡು ಗ್ರಾಮದ ಜಯಂತಿ ಹಾಗೂ ಕೂಲಿ ಕಾರ್ಮಿಕ ಜಯರಾಮ ಅವರು ಭಾನುವಾರ ಬೆಳಗ್ಗೆ ಕಾರ್ಯನಿಮಿತ್ತ ತಿ.ನರಸೀಪುರಕ್ಕೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕೊಳ್ಳೇಗಾಲ ಕಡೆಯಿಂದ ವೇಗವಾಗಿ ಬಂದ ಕಾರು ಇಬ್ಬರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಜಯಂತಿ ಸ್ಥಳದಲ್ಲೇ ಮೃತಪಟ್ಟರೆ, ಜಯರಾಮ ತೀವ್ರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.