ನಂಜನಗೂಡು: ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಪಾರ್ಲೆ ಆಗ್ರೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಗೆ ಭೂಮಿ ನೀಡಿದ ಸಂತ್ರಸ್ತ ಕುಟುಂಬಕ್ಕೆ ಉದ್ಯೋಗ ನೀಡದೆ ವಂಚಿಸಲಾಗಿದೆ ಎಂದು ಮನನೊಂದ ಯುವ ರೈತ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಕಾರ್ಖಾನೆಯ ಅಧಿಕಾರಿಗಳ ವಿರುದ್ಧ ಮೃತರ ಪತ್ನಿ ಎಫ್‌ಐಆರ್ ದಾಖಲಿಸಿದ್ದಾರೆ.
ಅಡಕನಹಳ್ಳಿ ಗ್ರಾಮದ ಸಿದ್ದೇಗೌಡ ಪುತ್ರ ಸಿದ್ದರಾಜು (28) ಮೃತ ರೈತ. ಇವರಿಗೆ ಪತ್ನಿ ಬಿ.ರಕ್ಷಿತಾ, ನಾಲ್ಕು ವರ್ಷದ ಪುತ್ರ ಇದ್ದಾರೆ.
ಅಡಕನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಮೃತ ಸಿದ್ದರಾಜುಗೆ ಸೇರಿದ ಸರ್ವೇ ನಂಬರ್ 96/1ರಲ್ಲಿದ್ದ ಜಮೀನು ಭೂಸ್ವಾಧೀನವಾಗಿತ್ತು. ಇವರ ಜಮೀನು ಸ್ವಾಧೀನಾಗಿರುವ ಜಾಗದಲ್ಲಿ ಪಾರ್ಲೆ ಆಗ್ರೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ ನಿರ್ಮಾಣವಾಗಿದ್ದು, ಈ ಕಾರ್ಖಾನೆಯಲ್ಲಿ ಸಂತ್ರಸ್ತ ರೈತ ಕುಟುಂಬಕ್ಕೆ ಉದ್ಯೋಗ ನೀಡಬೇಕೆಂಬ ಕೆಐಎಡಿಬಿ ನಿಯಮದ ಪ್ರಕಾರ ಸಿದ್ದರಾಜುಗೆ ಉದ್ಯೋಗ ನೀಡದೆ ವಂಚಿಸಲಾಗಿತ್ತು. ಈ ಬಗ್ಗೆ ಅನೇಕ ಬಾರಿ ಸೂಕ್ತ ದಾಖಲೆಗಳನ್ನು ಜಿಲ್ಲಾಡಳಿತ ಗಮನಕ್ಕೆ ತಂದಿದ್ದ ಸಿದ್ದರಾಜು ಪರವಾಗಿ ಜಿಲ್ಲಾಡಳಿತವೂ ಕಾರ್ಖಾನೆ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದರೂ ಇವರಿಗೆ ಉದ್ಯೋಗ ನೀಡದೆ ಸತಾಯಿಸಲಾಗುತ್ತಿತ್ತು. ಇದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಸಿದ್ದರಾಜು ಎಲ್ಲ ರೀತಿಯಲ್ಲೂ ಹೋರಾಟ ನಡೆಸಿ ಜರ್ಜರಿತರಾಗಿದ್ದರು ಎನ್ನಲಾಗಿದೆ.
ಏತನ್ಮಧ್ಯೆ ಭಾನುವಾರ ಸಿದ್ದರಾಜು ಪತ್ನಿ ರಕ್ಷಿತಾ ಸೇರಿದಂತೆ ಅವರ ತಂದೆ, ತಾಯಿ, ಸಹೋದರ ಸೇರಿ ಎಲ್ಲರೂ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಡೆತ್‌ನೋಟ್ ಬರೆದಿಟ್ಟು ಸಿದ್ದರಾಜು ನೇಣಿಗೆ ಶರಣಾಗಿದ್ದಾರೆ. ತಡರಾತ್ರಿ ಬೆಟ್ಟದಿಂದ ಮನೆಗೆ ಮರಳಿದ ಸಿದ್ದರಾಜು ಕುಟುಂಬದವರು ಮನೆ ಬಾಗಿಲು ತೆರೆಯದೇ ಇರುವುದನ್ನು ಗಮನಿಸಿ ಹಿಂಬದಿಯ ಬಾಗಿಲನ್ನು ಒಡೆದು ನೋಡಿದಾಗ ಸಿದ್ದರಾಜು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತದೇಹವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ತಡರಾತ್ರಿ ಸಾಗಿಸಲಾಯಿತು.
ಡೆತ್‌ನೋಟ್‌ನಲ್ಲಿ ಏನಿದೆ?: ಸಿದ್ದರಾಜು ನೇಣಿಗೆ ಶರಣಾಗುವ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು, ಜಿಲ್ಲಾಡಳಿತ ನಡೆಸಿದ ಎಲ್ಲ ಹಂತದ ಸಭೆಗಳಲ್ಲಿ ನನಗೆ ಉದ್ಯೋಗ ನೀಡಬೇಕೆಂದು ಹೇಳಿದ್ದರೂ ಕಾರ್ಖಾನೆಯವರು ಉದ್ಯೋಗ ನೀಡದೆ ವಂಚಿಸಿದ್ದಾರೆ. ನಾಲ್ಕು ವರ್ಷಗಳಿಂದ ಉದ್ಯೋಗಕ್ಕಾಗಿ ಅಲೆದಾಡಿರುವ ಎಲ್ಲ ದಾಖಲೆಗಳು ನನ್ನ ಬಳಿಯಿವೆ. ನನ್ನ ಸಾವಿಗೆ ಪಾರ್ಲೆ ಆಗ್ರೋ ಇಂಡಿಯಾ ಪ್ರೈ. ಲಿಮಿಟೆಡ್ ಕಾರ್ಖಾನೆಯ ಪ್ಲಾಂಟ್ ಹೆಡ್ ರಾಮ್‌ಪ್ರಸಾದ್ ಹಾಗೂ ಮಾನವ ಸಂಪನ್ಮೂಲ ಅಧಿಕಾರಿ ಮುಷೀದ್ ಉಲ್ಲಾ ಖಾನ್ ಕಾರಣ. ಇವರಿಗೆ ತಕ್ಕ ಶಿಕ್ಷೆ ಕೊಡಿಸಿ. ನನ್ನಂತಹ ಹಲವಾರು ರೈತ ಮಕ್ಕಳು ಭೂಮಿ ಕಳೆದುಕೊಂಡು ಬೀದಿಯಲ್ಲಿದ್ದಾರೆ. ಅವರಿಗೆಲ್ಲ ನ್ಯಾಯ ಕೊಡಿಸಿ. ಇದೇ ತರಹ ಆದರೆ ಎಲ್ಲ ರೈತ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಾರೆ ಎಂದು ಬರೆದಿದ್ದಾರೆ.
ಎಫ್‌ಐಆರ್ ದಾಖಲು: ಪತಿ ಸಿದ್ದರಾಜು ಬರೆದಿರುವ ಡೆತ್‌ನೋಟ್ ಆಧಾರದ ಮೇಲೆ ಅವರ ಪತ್ನಿ ಬಿ.ರಕ್ಷಿತಾ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಾರ್ಲೆ ಆಗ್ರೋ ಇಂಡಿಯಾ ಪ್ರೈ. ಲಿಮಿಟೆಡ್‌ನ ಮುಷೀದ್ ಉಲ್ಲಾ ಖಾನ್ ಹಾಗೂ ರಾಮಪ್ರಸಾದ್ ವಿರುದ್ಧ ಸೋಮವಾರ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಸರ್ಕಾರಿ ಕೆಲಸ ಕೊಡಿ: ಜಿಲ್ಲಾಡಳಿತ ಹಾಗೂ ಕೆಐಎಡಿಬಿ ಮೇಲೆ ವಿಶ್ವಾಸವಿಟ್ಟು ಜಮೀನು ಮಾರಾಟ ಮಾಡುವ ರೈತರಿಗೆ ನಿಯಮದಂತೆ ಕುಟುಂಬ ಸದಸ್ಯರಿಗೆ ಉದ್ಯೋಗ ಕೊಡಿಸುವುದೂ ಕೂಡ ಜಿಲ್ಲಾಡಳಿತ ಹಾಗೂ ಕೆಐಎಡಿಬಿ ಕರ್ತವ್ಯವಾಗಿದೆ. ಆದರೆ ಈ ವಿಚಾರದಲ್ಲಿ ಕೆಐಎಡಿಬಿ ಅಧಿಕಾರಿಗಳು ಸಂಪೂರ್ಣ ಬೇಜವಾಬ್ದಾರಿ ತೋರುತ್ತಿದ್ದಾರೆ. ಇದರ ಪರಿಣಾಮವಾಗಿಯೇ ಕಾರ್ಖಾನೆ ಆಡಳಿತ ಮಂಡಳಿಗಳು ಸಂತ್ರಸ್ತ ರೈತ ಕುಟುಂಬಕ್ಕೆ ದ್ರೋಹ ಎಸಗುತ್ತಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನ ಸಿದ್ದರಾಜು ಸತತ ನಾಲ್ಕು ವರ್ಷಗಳ ಕಾಲ ಉದ್ಯೊಗಕ್ಕಾಗಿ ಹೋರಾಟ ನಡೆಸಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನಗೆ ಆದ ಅನ್ಯಾಯ ಇತರ ಸಂತ್ರಸ್ತ ರೈತ ಮಕ್ಕಳಿಗೆ ಆಗದಂತೆ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಸಿದ್ದರಾಜು ಸಾವಿಗೆ ಜಿಲ್ಲಾಡಳಿತವೇ ನೇರ ಹೊಣೆ. ಇದರ ನೈತಿಕ ಹೊಣೆ ಹೊತ್ತು ಸರ್ಕಾರ ಮೃತ ಸಿದ್ದರಾಜು ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಬೇಕು ಹಾಗೂ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ಆಗ್ರಹಿಸಿದ್ದಾರೆ.