ನ್ಯೂಸ್

ಲವ್ ಜಿಹಾದ್‌ಗೆ ಸಿಲುಕಿದ ಯುವತಿ; ಪ್ರಧಾನಿ, ಪೊಲೀಸರ ನೆರವು ಕೋರಿದ ಸಂತ್ರಸ್ತೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಯುವತಿಯೊಬ್ಬಳು ಎಕ್ಸ್ (ಟ್ವಿಟರ್)ನಲ್ಲಿ ಲವ್ ಜಿಹಾದ್‌ನಲ್ಲಿ ಸಿಲುಕಿರುವುದಾಗಿ ಅಳಲು ತೋಡಿಕೊಂಡಿದ್ದಾಳೆ.

ಲವ್ ಜಿಹಾದ್‌ಗೆ ಸಿಲುಕಿದ್ದು, ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ಅಪಾಯದಲ್ಲಿ ಇದ್ದೇನೆ. ನನ್ನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆದಿದೆ. ತುರ್ತಾಗಿ ನನಗೆ ಪೊಲೀಸರ ಸಹಾಯ ಬೇಕಿದೆ ಎಂದು ಆರೋಪಿಸಿ ಯುವತಿ ಎಕ್ಸ್‌ನಲ್ಲಿ ಅಳಲು ತೋಡಿಕೊಂಡಿದ್ದಾಳೆ. ಇದನ್ನು ಪ್ರಧಾನಿ ನರೇಂದ್ರ ಮೋದಿ, ನಗರ ಪೊಲೀಸ್ ಆಯುಕ್ತ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಟ್ಯಾಗ್ ಮಾಡಿ ನೆರವು ನೀಡುವಂತೆ ಮನವಿ ಮಾಡಿದ್ದಾಳೆ.

ಅಲ್ಲದೆ, ೇಸ್‌ಬುಕ್‌ನಲ್ಲಿ ಕಾಶ್ಮೀರ ಮೂಲದ ಯುವಕ, ಪರಿಚಯವಾಗಿದ್ದು, ಇಬ್ಬರ ನಡುವೆ ಹಣಕಾಸಿನ ವ್ಯವಹಾರ ನಡೆದಿತ್ತು. ಮದುವೆ ಆಗುವುದಾಗಿ ನಂಬಿಸಿ ಹಣ ಪಡೆದು ವಂಚನೆ ಎಸಗಿದ್ದಾನೆ. ಈಗ ಮದುವೆ ಆಗುವುದಿಲ್ಲ ಎಂದು ತನ್ನನ್ನು ದೂರ ಮಾಡಿದ್ದಾನೆ. ಪ್ರಾಣ ಬೆದರಿಕೆ ಒಡ್ಡಿರುವ ಕುರಿತು ಸಂತ್ರಸ್ತೆ ಆರೋಪಿಸಿದ್ದಾಳೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ಬೆಳ್ಳಂದೂರು ಪೊಲೀಸರು ಯುವತಿಯ ಎಕ್ಸ್‌ನಲ್ಲಿನ ದೂರು ಗಮನಿಸಿ ಆಕೆಯನ್ನು ಸಂಪರ್ಕ ಮಾಡಿದ್ದಾರೆ. ಠಾಣೆಗೆ ಬಂದು ಲಿಖಿತ ದೂರು ನೀಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ ಗುಪ್ತಾ, ಎಕ್ಸ್‌ನಲ್ಲಿ ಯುವತಿ ಆರೋಪ ಮಾಡಿದ್ದಾರೆ. ಪೊಲೀಸರಿಗೆ ದೂರು ಕೊಟ್ಟಿಲ್ಲ. ಠಾಣೆಗೆ ಬಂದು ದೂರು ಕೊಟ್ಟರೆ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ ಯುವತಿಯನ್ನು ಪೊಲೀಸ್ ಅಧಿಕಾರಿಗಳು ಸಂಪರ್ಕಿಸಿದ್ದಾರೆ. ದೂರು ನೀಡುವ ಬಗ್ಗೆ ವಕೀಲರ ಜೊತೆಗೆ ಚರ್ಚೆ ನಡೆಸಿ ಯೋಚನೆ ಮಾಡುತ್ತೇವೆ ಎಂದು ಸಂತ್ರಸ್ತೆ ಹೇಳಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ, ಪ್ರಸ್ತುತ ಬೆಂಗಳೂರಿನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಘಟನೆ ನಗರದಲ್ಲಿ ನಡೆದಿದೆಯೇ? ಬೇರೆ ಕಡೆ ನಡೆದಿದೆಯೇ ಅಂತ ತಿಳಿಯಬೇಕಿದೆ. ದೂರು ಕೊಟ್ಟರೇ ಕಾನೂನು ಬದ್ಧವಾಗಿ ಕ್ರಮ ತೆಗೆದುಕೊಳ್ಳುತ್ತೆವೆ ಎಂದು ರಮಣ ಗುಪ್ತಾ ತಿಳಿಸಿದ್ದಾರೆ.