ನ್ಯೂಸ್

ರಸ್ತೆ ಅಪಘಾತದಿಂದ ಯುವಕನ ವೈವಾಹಿಕ ಜೀವನಕ್ಕೆ ಕುತ್ತು : ಗಾಯಾಳು ನೆರವಿಗೆ ಹೈಕೋರ್ಟ್!


ಬೆಂಗಳೂರು :
ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ವೈವಾಹಿಕ ಜೀವನ ನಡೆಸಲು ಸಾಧ್ಯವಾಗದಂತಹ ಸ್ಥಿತಿಗೆ ತಲುಪಿದ್ದ 26 ವರ್ಷದ ಯುವಕನಿಗೆ ಹೈಕೋರ್ಟ್ ಮಿಡಿದಿದೆ. ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿದ್ದ 22 ಲಕ್ಷ ರೂ. ಪರಿಹಾರವನ್ನು 38 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿ ಆದೇಶಿಸಿದೆ.

ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿದ್ದ 22 ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಶಿವಮೊಗ್ಗ ಜಿಲ್ಲೆಯ ಮಧುಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಜಯ್ ಕುಮಾರ್ ಎ.ಪಾಟೀಲ್ ಅವರಿದ್ದ ಧಾರವಾಡ ಪೀಠ ಈ ಆದೇಶ ಮಾಡಿದೆ.

ಕೆಲ ಕಾಲ ವಾದ ಆಲಿಸಿದ ನ್ಯಾಯ ಪೀಠವು, ಅಪಘಾತದಿಂದ ಉಂಟಾಗಿರುವ ದೈಹಿಕ ಮತ್ತು ಮಾನಸಿಕ ನಷ್ಟವನ್ನು ಹಣದ ರೂಪದಲ್ಲಿ ಪರಿಗಣಿಸಲಾಗುವುದಿಲ್ಲ. ಮನುಷ್ಯನಿಗೆ ಆಗಿರುವ ನೋವನ್ನು ಹಣದ ಮೂಲಕ ಸಮೀಕರಣ ಮಾಡುವುದಕ್ಕೆ ಕಷ್ಟ ಸಾಧ್ಯ. ಆದರೂ ನೊಂದವರಿಗೆ ನಷ್ಟ ಪರಿಹಾರ ನೀಡದೆ ಬೇರೆ ಮಾರ್ಗವೇ ಇಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ಸುಪ್ರೀಂಕೋರ್ಟ್‌ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಮೇಲ್ಮನವಿದಾರ ಕೃಷಿಕರಾಗಿದ್ದು, ಅಪಘಾತದಲ್ಲಿ ಆತನ ಮೊಣಕಾಲಿನ ಮೇಲಿನಿಂದ ಬಲಗಾಲನ್ನು ತೆಗೆಯುವಂತಾಗಿದೆ. ಹಾಗಾಗಿ ಮತ್ತೆ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗಲು ಅಸಾಧ್ಯ. ಜತೆಗೆ ಆತ ಪ್ರಸ್ತುತ 26 ವರ್ಷ ವಯಸ್ಸಿನವನಾಗಿದ್ದು ಮುಂದಿನ ದಿನಗಳಲ್ಲಿ ವಿವಾಹವೂ ಸೇರಿ ಲೌಕಿಕ ಜೀವನ ಅನುಭವಿಸಲು ಸಾಧ್ಯವಾಗದಂತಹ ಸ್ಥಿತಿ ಎದುರಾಗಿದೆ.ಈ ಹಿಂದಿನ ದುಡಿಮೆಯೂ ಇಲ್ಲವಾಗಲಿದ್ದು, ಜೀವನ ನಡೆಸುವುದು ಕಷ್ಟಕರವಾಗಲಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.


ನೊಂದವರಿಗೆ ಪರಿಹಾರ ನೀಡುವ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಹಣದ ಮೌಲ್ಯ ಕಡಿಮೆಯಾಗಲಿದೆ. ಜತೆಗೆ, ಗಾಯಾಳುವಿನ ಜೀವಿತಾವಧಿಯೂ ಕಡಿಮೆಯಾಗಲಿದೆ ಎಂಬ ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಅಪಘಾತಕ್ಕೊಳಗಾದ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಆತನ ಶೇ.90ರಷ್ಟು ಅಂಗವೈಕಲ್ಯವನ್ನು ಪರಿಗಣನೆಗೆ ತೆಗೆದುಕೊಂಡು ಪರಿಹಾರ ಮೊತ್ತ ಹೆಚ್ಚಳ ಮಾಡಲಾಗುತ್ತಿದೆ ಎಂದು ಪೀಠ ಹೇಳಿದೆ.

ಮೇಲ್ಮನವಿದಾರನ ಮಾಸಿಕ ಗಳಿಕೆ 13,250 ರೂ.ಗಳು ಶೇ.40 ಭವಿಷ್ಯದ ನಿರೀಕ್ಷೆಗಳು ಮತ್ತು ಶೇ.90 ಅಂಗವೈಕಲ್ಯವನ್ನು ಪರಿಗಣನೆಗೆ ತೆಗೆದುಕೊಂಡರೆ 34,05,780 ರೂ.ಗಳಾಗಲಿದೆ. ಅಲ್ಲದೆ, ಘಟನೆಯಿಂದ ಅನುಭವಿಸಿರುವ ನೋವಿಗೆ ಪರಿಹಾರವಾಗಿ ನೀಡಿದ್ದ 50 ಸಾವಿರ ರೂ.ಗಳನ್ನು ಒಂದು ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿ ಆದೇಶಿಸಿದೆ.

ಅಲ್ಲದೆ, ವೈದ್ಯಕೀಯ ವೆಚ್ಚವಾಗಿ 94 ಸಾವಿರ, ಘಟನೆ ನಡೆದ ಸಂದರ್ಭದಲ್ಲಿ ಆದ ನಷ್ಟವಾಗಿ 79,500, ನೋವು ಅನುಭವಿಸುವುದಕ್ಕಾಗಿ 1 ಲಕ್ಷ ರೂ. ಮತ್ತು ವಿವಾಹ ಸಾಧ್ಯವಾಗದ ಹಿನ್ನೆಲೆಯಲ್ಲಿ 50 ಸಾವಿರ ಸೇರಿ ಒಟ್ಟು 38,29,289 ರೂಗಳ ಪಾವತಿ ಮಾಡಬೇಕು ಎಂದು ಪೀಠ ತಿಳಿಸಿದೆ.

ಏನಿದು ಪ್ರಕರಣ?
ಮೇಲ್ಮನವಿದಾರರು 2019ರ ಸೆ.5ರಂದು ಶಿವಮೊಗ್ಗದ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಎದುರು ದಿಕ್ಕಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿತ್ತು. ಪರಿಣಾಮ ದ್ವಿಚಕ್ರ ವಾಹನ ಸವಾರನ ಬಲಗಾಲಿಗೆ ಪೆಟ್ಟುಬಿದ್ದಿತ್ತು. ಪರಿಣಾಮ ಬಲಗಾಲನ್ನು ಮೊಣಕಾಲಿನಿಂದ ಮೇಲ್ಭಾಗದವರೆಗೂ ತೆಗೆದು ಹಾಕಲಾಗಿತ್ತು.

ಈ ಸಂಬಂಧ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ 22,15,600 ರೂ. ಪರಿಹಾರ ನೀಡಲು ಕಾರಿನ ವಿಮಾ ಕಂಪನಿ ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಸೂರೆನ್ಸ್ ಕಂಪೆನಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಯುವಕ ಹೆಚ್ಚಿನ ಪರಿಹಾರ ಕೊಡಿಸುವಂತೆ ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.