ಶಿವಮೊಗ್ಗ: ಶಿವಮೊಗ್ಗದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಈ ನಡುವೆ ಯುವಕನೊಬ್ಬ ಮದ್ಯದಂಗಡಿಯಲ್ಲಿ ಸಾಲಕ್ಕೆ ಮದ್ಯ(ಎಣ್ಣೆ) ಕೊಡಲಿಲ್ಲ ಎಂಬ ಕಾರಣಕ್ಕೆ ಸುರಿಯುವ ಮಳೆಯಲ್ಲೇ ಛತ್ರಿ ಹಿಡಿದು ಹೆದ್ದಾರಿಗೆ ಅಡ್ಡ ನಿಂತು ಅವಾಂತರ ಸೃಷ್ಟಿಸಿದ್ದಾನೆ.
ನಗರದ ಎನ್.ಟಿ.ರಸ್ತೆಯ ಮದ್ಯದಂಗಡಿಗೆ ಶುಕ್ರವಾರ ಮಧ್ಯಾಹ್ನ ತೆರಳಿದ್ದ ಮದ್ಯವ್ಯಸನಿ ಕುಡಿಯುವುದಕ್ಕೆ ಮದ್ಯ ಕೇಳಿದ್ದ. ಹಣ ಕೊಡದೇ ಮದ್ಯ ಕೊಡುವುದಿಲ್ಲ ಎಂದು ಸಿಬ್ಬಂದಿ ಹೇಳಿದ್ದರು. ಇದರಿಂದ ಸಿಟ್ಟಿಗೆದ್ದ ಆತ ಛತ್ರಿ ಹಿಡಿದು ನೇರವಾಗಿ ಶಿವಮೊಗ್ಗ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಬಂದು ನಿಂತಿದ್ದ. ಸುಮಾರು 10 ನಿಮಿಷ ರಸ್ತೆ ಮಧ್ಯೆದಲ್ಲೇ ನಿಂತು ವಾಹನಗಳಿಗೂ ದಾರಿ ಬಿಡಲಿಲ್ಲ.
ಕೆಲ ಬಸ್‌ಗಳ ಸಿಬ್ಬಂದಿ ಆತನನ್ನು ಪಕ್ಕಕ್ಕೆ ಎಳೆದು ಹಾಕುತ್ತಿದ್ದರು. ಬಳಿಕ ಆತ ಮತ್ತೆ ರಸ್ತೆ ಮಧ್ಯೆಯೇ ನಿಲ್ಲುತ್ತಿದ್ದ. ಇದು ನೋಡುಗರಿಗೆ ಮನರಂಜನೆ ನೀಡಿತು. ಕೆಲವರು ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರಯೋಜನ ಆಗಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಆತನೇ ಅಲ್ಲಿಂದ ಜಾಗ ಖಾಲಿ ಮಾಡಿದ.