ಬಿ.ಕಾಂ ಮುಗಿಸಿ ಬಿಎಂಟಿಸಿ ಇ-ಬಸ್ ಡ್ರೈವರ್ ಆದ ಯವಕ 
ನ್ಯೂಸ್

B.Com ಮುಗಿಸಿ BMTC ಬಸ್ ಡ್ರೈವರ್ ಆದ ಯುವಕ! ಕೈಗೆ ಸಿಗೋದು 22 ಸಾವಿರ ಸಂಬಳ; ಬೆಂಗಳೂರಲ್ಲಿ ಬದುಕೋದು ಹೆಂಗೆ? | BMTC Bus Driver

BCom Graduate Bus Driver: ಪ್ರತಿ ಬಜೆಟ್‌ನಲ್ಲೂ ಕೋಟಿ ಕೋಟಿ ಹಣದ ಲೆಕ್ಕ ತೋರಿಸುವ ಸರ್ಕಾರಕ್ಕೆ, ದಿನವಿಡೀ ದುಡಿಯುವ ಗುತ್ತಿಗೆ ನೌಕರರ ಕಷ್ಟ ಮಾತ್ರ ಕಣ್ಣಿಗೆ ಕಾಣುತ್ತಿಲ್ಲ? ಶಾಸಕರು, ಮಂತ್ರಿಗಳ ಸಂಬಳ-ಭತ್ಯೆಗಳು ಮತ್ತು ಟೆಂಡರ್ ಮೊತ್ತಗಳು ಹಣದುಬ್ಬರದ ಹೆಸರಿನಲ್ಲಿ ಏರಿಕೆಯಾಗುತ್ತಿವೆ. ಆದರೆ ಬಡ ಗುತ್ತಿಗೆ ನೌಕರರ ವೇತನ ಹೆಚ್ಚಿಸಲು ಸರ್ಕಾರಕ್ಕೆ ಮನಸ್ಸಿಲ್ಲ. ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ಚಾಲಕನೊಬ್ಬನ ದಿನನಿತ್ಯದ ಸವಾಲಿನ ಜೀವನವೇ ಸರ್ಕಾರದ ಈ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ.

ಸರ್ಕಾರವು ಕಾಯಂ ನೇರ ನೇಮಕಾತಿಯನ್ನು ನಿಲ್ಲಿಸಿರುವುದರಿಂದ, ಇಂದು ಲಕ್ಷಾಂತರ ವಿದ್ಯಾವಂತ ಯುವಕರು ಗುತ್ತಿಗೆ ಹಾಗೂ ದಿನಗೂಲಿ ಆಧಾರದ ಮೇಲೆ ಕನಿಷ್ಠ ವೇತನಕ್ಕೆ ದುಡಿಯುವಂತಾಗಿದೆ. ಇತ್ತೀಚೆಗೆ ಯೂಟ್ಯೂಬರ್‌ ಒಬ್ಬರು ನಡೆಸಿದ ಸಂದರ್ಶನದಲ್ಲಿ, ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕನೊಬ್ಬ ತಾನು ಎದುರಿಸುತ್ತಿರುವ ಕಠಿಣ ಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ.

ಬಿ.ಕಾಂ. ಓದಿದರೂ ಬರಿ 22,000 ರೂ. ಸಂಬಳ

ಬಿಎಂಟಿಸಿ ಯಲ್ಲಿ ಎಲೆಕ್ಟ್ರಿಕ್ ಬಸ್ ಚಾಲಕನಾಗಿ ಕೆಲಸ ಮಾಡುತ್ತಿರುವ ಈ ಯುವಕ ನಿಜವಾಗಿ ಬಿ.ಕಾಂ.ಪದವೀಧರ. ಸರಿಯಾದ ಸರ್ಕಾರಿ ಕೆಲಸ ಸಿಗದ ಕಾರಣ ಕಾಂಟ್ರಾಕ್ಟ್ ಆಧಾರದಲ್ಲಿ ಬಿಎಂಟಿಸಿ ಬಸ್ ಚಾಲಕನಾಗಿ ಸೇರಿಕೊಂಡಿದ್ದರು. ‘ನಾನು ಕಳೆದ 5 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಆರಂಭದಲ್ಲಿ 18,000 ರೂಪಾಯಿ ಇದ್ದ ಸಂಬಳ ಈಗ 24,000 ರೂಪಾಯಿಗೆ ತಲುಪಿದೆ. ಆದರೆ ಪಿಎಫ್ ಹಾಗೂ ಇತರ ಕಡಿತಗಳ ನಂತರ ಪ್ರತಿ ತಿಂಗಳು ನನ್ನ ಕೈಗೆ ಸಿಗುವುದು ಕೇವಲ 22,000 ರೂಪಾಯಿ ಮಾತ್ರ’ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

22,000 ರೂ. ಸಂಬಳದಲ್ಲಿ ಬದುಕೋದು ಹೆಂಗೆ?

ಬೆಂಗಳೂರಿನಂತಹ ದುಬಾರಿ ನಗರದಲ್ಲಿ 22,000 ರೂಪಾಯಿ ಸಂಬಳದಲ್ಲಿ ಸಾಮಾನ್ಯ ಕೆಳ ಮಧ್ಯಮ ವರ್ಗದ ಜೀವನ ನಡೆಸುವುದು ಕೂಡ ಕಷ್ಟ. ಇಡೀ ಸಂಬಳ ಮನೆ ಬಾಡಿಗೆ, ಊಟ ಮತ್ತು ದಿನನಿತ್ಯದ ಪ್ರಯಾಣದ ವೆಚ್ಚಕ್ಕೇ ಮುಗಿದುಹೋಗುತ್ತದೆ. ಊರಿನಿಂದ ಬೆಂಗಳೂರಿಗೆ ಕೆಲಸಕ್ಕೆ ಬರುವ ಯುವಕರು ಮನೆಗೆ 5,000 ರೂಪಾಯಿ ಕಳುಹಿಸಿದರೆ ಅವರ ಬಳಿ ಏನೂ ಉಳಿಯುವುದಿಲ್ಲ. ಇನ್ನು ಮದುವೆಯಾಗಿ ಸಂಸಾರ ನಡೆಸಬೇಕಾದರೆ ಈ ಆದಾಯದಲ್ಲಿ ತೀವ್ರ ಕಷ್ಟ ಎದುರಿಸಬೇಕಾಗುತ್ತದೆ.

ಬಿಎಂಟಿಸಿ ಬಸ್​

ನೇರ ನೇಮಕಾತಿಯಾದರೆ 50,000 ರೂ. ಸಂಬಳ

ಸರ್ಕಾರ ನೇರ ನೇಮಕಾತಿ ಮೂಲಕ ಚಾಲಕರನ್ನು ಆಯ್ಕೆ ಮಾಡಿದರೆ ಅಧಿಕೃತ ಸೌಲಭ್ಯಗಳ ಜೊತೆಗೆ ಕನಿಷ್ಠ 40,000 ದಿಂದ 50,000 ರೂಪಾಯಿ ವರೆಗೆ ಸಂಬಳ ನೀಡಬೇಕಾಗುತ್ತದೆ. ಈ ಹಣಕಾಸಿನ ಹೊರೆಯಿಂದ ತಪ್ಪಿಸಿಕೊಳ್ಳಲು ಸಾರಿಗೆ ಇಲಾಖೆ ಕಾಂಟ್ರಾಕ್ಟ್ ಹಾದಿ ಹಿಡಿದಿದೆ. ಜನಪ್ರತಿನಿಧಿಗಳು ಲಕ್ಷಾಂತರ ರೂಪಾಯಿ ಭತ್ಯೆ ಪಡೆಯುವಾಗ, ಕಾಂಟ್ರಾಕ್ಟ್ ನೌಕರರಿಗೆ ಯಾವುದೇ ಉದ್ಯೋಗ ಭದ್ರತೆ ಇಲ್ಲದಿರುವುದಕ್ಕೆ ಸಾರ್ವಜನಿಕ ವಲಯದಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ.

ಬಿಎಂಟಿಸಿ ಇ-ಬಸ್ ಡ್ರೈವರ್ ಕೆಲಸ ಹೇಗಿರುತ್ತೆ?

ಪ್ರಸ್ತುತ ಕಾಂಟ್ರಾಕ್ಟ್ ಆಧಾರದಲ್ಲಿ ಗರಿಷ್ಠ 24,000 ರೂ. ಇರುತ್ತದೆ. ಕಡಿತಗಳ ನಂತರ ಚಾಲಕನ ಕೈಗೆ 22,000 ರೂ. ಸಿಗುತ್ತದೆ. ಅರ್ಹತೆ ಮತ್ತು ಸವಾಲು. ಹೆವಿ ಟ್ರಾನ್ಸ್‌ಪೋರ್ಟ್ ವೆಹಿಕಲ್ (HTV) ಲೈಸೆನ್ಸ್ ಕಡ್ಡಾಯ. ಬೆಂಗಳೂರಿನ ವಿಪರೀತ ಟ್ರಾಫಿಕ್‌ನಲ್ಲಿ ಬಸ್ಸುಗಳನ್ನು ಸುರಕ್ಷಿತವಾಗಿ ಚಲಾಯಿಸುವ ದೊಡ್ಡ ಜವಾಬ್ದಾರಿ ಇವರ ಮೇಲಿರುತ್ತದೆ.

ಇದನ್ನೂ ಓದಿ: ನಾಯಿ ಕಚ್ಚಿದ್ರೆ ಅಪ್ಪಿತಪ್ಪಿಯೂ ನಿರ್ಲಕ್ಷ್ಯ ಮಾಡಬೇಡಿ! ರೇಬೀಸ್ ಬಂದ್ರೆ ಪ್ರಾಣಕ್ಕೇ ಕುತ್ತು | Rabies symptoms

ಗುತ್ತಿಗೆ ಚಾಲಕರಿಗೆ ಯಾವುದೇ ಕೆಲಸದ ಭದ್ರತೆ ಇರಲ್ಲ. ಖಾಯಂ ಸರ್ಕಾರಿ ನೌಕರರಿಗೆ ಸಿಗುವ ಹೆಚ್ಚುವರಿ ಸೌಲಭ್ಯಗಳೂ ಇವರಿಗೆ ಸಿಗುವುದಿಲ್ಲ. ಪ್ರಯಾಣಿಕರನ್ನು ಪ್ರತಿದಿನ ಸುರಕ್ಷಿತವಾಗಿ ತಲುಪಿಸುವ ಈ ಚಾಲಕರ ಜೀವನ ಮಾತ್ರ ಅಭದ್ರತೆಯಿಂದ ಕೂಡಿದೆ. ಇಂತಹ ಗುತ್ತಿಗೆ ನೌಕರರ ಸಂಬಳವನ್ನು ಸರ್ಕಾರ ಶೀಘ್ರದಲ್ಲೇ ಪರಿಷ್ಕರಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.