ಬೆಂಗಳೂರು: ಚಲಿಸುತ್ತಿದ್ದ ರೈಲಿನಲ್ಲಿ ಮಧ್ಯರಾತ್ರಿ ಸೆಲ್ಫಿ ಫೋಟೋ ತೆಗೆದುಕೊಳ್ಳಲು ಹೋದ ಯುವಕನೊಬ್ಬ ನದಿಗೆ ಬಿದ್ದು ಮೃತಪಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ಅಭಿಷೇಕ್(19) ಮೃತ. ಬೆಂಗಳೂರಿನ ಗಾಂಧಿ ನಗರದ ಬಾರ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್, ದೇವಸ್ಥಾನದ ಪೂಜೆ ಸಂಬಂಧ ನ.6ರಂದು ಪಾಂಡವಪುರಕ್ಕೆ ಸ್ನೇಹಿತರೊಂದಿಗೆ ಮೆಜೆಸ್ಟಿಕ್‌ನಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಮಾರ್ಗಮಧ್ಯೆ ರೈಲಿನಲ್ಲಿ ಪ್ರಯಾಣಿಸುವಾಗ ಬಾಗಿಲ ಬಳಿ ನಿಂತು ಸೆಲ್ಫಿ ತೆಗೆಯುತ್ತಿದ್ದ ಅಭಿಷೇಕ್ ಕಾಣೆಯಾಗಿದ್ದ. ಆದ್ರೆ ಜತೆಗಿದ್ದ ಸ್ನೇಹಿತರಿಗೆ ಏನಾಗಿದೆ? ಅನ್ನೋದು ಗೊತ್ತಾಗಿರಲಿಲ್ಲ. ಪಾಂಡವಪುರ ಬಳಿ ರೈಲಿನಿಂದ ಇಳಿದ ಸ್ನೇಹಿತರು ಹುಡುಕಾಟ ನಡೆಸಿದ್ದರೂ ಅಭಿಷೇಕ್ನ ಸುಳಿವು ಪತ್ತೆಯಾಗಿರಲಿಲ್ಲ. ಅವರೆಲ್ಲ ವಾಪಾಸ್ ಊರಿಗೆ ಹೋಗಿದ್ದರು.
ಎರಡು ದಿನವಾದರೂ ಅಭಿಷೇಕ್ ಬಾರದ ಹಿನ್ನೆಲೆ ಆತಂಕಗೊಂಡ ಮನೆಯವರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಪುಟ್ಟಸ್ವಾಮಿ ನೇತೃತ್ವದ ತಂಡ ಪಾಂಡವಪುರಕ್ಕೆ ರೈಲಿನಲ್ಲಿ ಹೋಗಿರುವ ಬಗ್ಗೆ ಸ್ನೇಹಿತರಿಂದ ಮಾಹಿತಿ ಸಂಗ್ರಹಿಸಿ, ಮಂಡ್ಯ ಪೊಲೀಸರು ಹಾಗೂ ಸ್ಥಳೀಯ ಅಗ್ನಿಶಾಮಕದಳಕ್ಕೂ ಮಾಹಿತಿ ನೀಡಿದ್ದರು. ಸತತ ನಾಲ್ಕೈದು ದಿನಗಳ ಕಾಲ ಹುಡುಕಾಟ ನಡೆಸಿದ್ದರೂ ಅಭಿಷೇಕ್ ಬಗ್ಗೆ ಸುಳಿವು ಸಿಕ್ಕಿರಲಿಲ್ಲ.
ವಿಚಾರಣೆ ವೇಳೆ ಸ್ನೇಹಿತರು ಬಾಯ್ಬಿಟ್ಟ ಸೆಲ್ಫಿ ಕುರಿತ ಮಾಹಿತಿ ಆಧಾರಿಸಿ ತನಿಖೆ ಕೈಗೊಂಡ ಪೊಲೀಸರಿಗೆ ರೈಲ್ವೆ ಬ್ರಿಡ್ಜ್ನ ಕಂಬಿ ತಾಗಿ ಲೋಕಪಾವನಿ ನದಿಗೆ ಅಭಿಷೇಕ್ ಬಿದ್ದಿರಬಹುದು ಎಂಬ ಶಂಕೆ ಮೂಡಿತ್ತು. ಅದರಂತೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರ ಸಹಾಯದಿಂದ ಪೊಲೀಸರು ಸತತ ಮೂರು ದಿನಗಳ ಕಾಲ ಶೋಧ ನಡೆಸಿದರು. ನ.14ರಂದು ಶ್ರೀರಂಗಪಟ್ಟಣದಿಂದ 6 ಕಿಲೋಮೀಟರ್ ದೂರದಲ್ಲಿ ನದಿ ನೀರಿನಲ್ಲಿ ಅಭಿಷೇಕ್ ಶವ ಪತ್ತೆಯಾಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವವನ್ನು ಪೋಷಕರಿಗೆ ಒಪ್ಪಿಸಲಾಗಿದೆ. ಎಂದು ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ತಿಳಿಸಿದ್ದಾರೆ.