ಲಕ್ನೋ: ರೀಲ್ಸ್ ಮಾಡುವ ಹುಚ್ಚು ಯುವಜನರಲ್ಲಿ ಹೆಚ್ಚಾಗುತ್ತಿದೆ. ತಮ್ಮ ಪ್ರಾಣ ಪಣಕ್ಕಿಟ್ಟು ರೀಲ್ಸ್ ಮಾಡಲು ಹೋಗಿ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಉತ್ತರ ಪ್ರದೇಶದ ಉತ್ತರ ಪ್ರದೇಶದ ಜಹಾಂಗೀರಾಬಾದ್‌ನ ತೇರಾ ದೌಲತ್‌ಪುರ ನಿವಾಸಿ ಮುನ್ನಾ ಪುತ್ರ ಫರ್ಮಾನ್(14). ಈತ ರೈಲು ಹಳಿ ಮೇಲೆ ರೀಲ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.
ಫರ್ಮಾನ್ ತನ್ನ ಸ್ನೇಹಿತರಾದ ಶುಐಬ್, ನಾದಿರ್ ಮತ್ತು ಸಮೀರ್ ಜೊತೆ ರೀಲ್ಸ್ ದಾಮೆದರ್‌ಪುರದ ರೈಲು ಕ್ರಾಸಿಂಗ್ ಬಳಿ ಹಳಿಗಳ ಬಳಿ ನಿಂತು ರೀಲ್ ಮಾಡಲು ತಯಾರಿ ನಡೆಸುತ್ತಿದ್ದಂತೆ ವೇಗವಾಗಿ ಬಂದ ರೈಲು ಅವನಿಗೆ ಡಿಕ್ಕಿ ಹೊಡೆದಿದೆ. ರೈಲಿನ ವೇಗದ ರಭಸಕ್ಕೆ ಆತನನ್ನು ಸ್ಪಲ್ಪ ದೂರದ ವರೆಗೆ ಎಳೆದುಕೊಂಡು ಹೋಗಿದೆ. ತೀವ್ರ ಗಾಯಗೊಂಡಿದ್ದ ಆತ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತದೇಹವನ್ನು ಹತ್ತಿರದ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಧರ್ಮೇಂದ್ರ ಸಿಂಗ್ ತಿಳಿಸಿದ್ದಾರೆ.
ಫರ್ಮಾನ್ ರೈಲು ಹಳಿಯ ಮೇಲೆ ರೀಲ್ ಮಾಡಲು ಪ್ರಾರಂಭಿಸುತ್ತಿದ್ದಂತೆ ಶರವೇಗದಲ್ಲಿ ಬಂದ ರೈಲು ಡಿಕ್ಕಿ ಹೊಡೆದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿದಾಕ್ಷಣ ಎದೆಯಲ್ಲಿ ನಡುಕ ಹುಟ್ಟುವುದಂತೂ ಖಂಡಿತ. ಸಾವಿಗೆ ರೀಲ್ಸ್ ಕಾರಣ ಎಂಬುದು ಆಘಾತಕಾರಿಯಾಗಿದೆ.