ನ್ಯೂಸ್

ಇಬ್ಬರು ಹೆಣ್ಣುಮಕ್ಕಳಿಗೆ ಚಾಕುವಿನಿಂದ ಇರಿದು ರೈಲಿಗೆ ತಲೆಕೊಟ್ಟ ಯುವಕ !

ತೆಲಂಗಾಣ: ಚಲಿಸುವ ರೈಲಿಗೆ ಸಿಲುಕಿ ಬಾಲಕ (16) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನ ವಿದ್ಯಾನಗರದ ಬಳಿ ಈ ಘಟನೆ ನಡೆದಿದೆ.

ಘಟನೆ ಕುರಿತು ಕಾಚಿಗುಡ ರೈಲ್ವೆ ಇನ್ಸ್‌ಪೆಕ್ಟರ್ ಎಲ್ಲಪ್ಪ ಮಾಹಿತಿ ನೀಡಿದ್ದು, ಗುರುವಾರ ಮಧ್ಯರಾತ್ರಿ ವಿದ್ಯಾನಗರ ಮತ್ತು ಜಾಮಿಯಾ ಉಸ್ಮಾನಿಯಾ ನಿಲ್ದಾಣಗಳ ನಡುವೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದರು.
ಇತ್ತೀಚೆಗೆ ಅಂಬರ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಓರ್ವ ಬಾಲಕಿ ಹಾಗೂ ಯುವತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ ಬಾಲಕನೇ ಮೃತ ಬಾಲಕ ಎಂದು ಗುರುತಿಸಲಾಗಿದೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಏನಿದು ಪ್ರಕರಣ ? : ಪ್ರೀತಿ, ಪ್ರೇಮ ಹೆಸರಲ್ಲಿ ಅಪ್ರಾಪ್ತ ಬಾಲಕಿಗೆ (16) ಕೆಲ ದಿನಗಳಿಂದ ಮೊಬೈಲ್​ನಲ್ಲಿ ಮೆಸೇಜ್​ ಕಳುಹಿಸುವುದು, ಕಾಲೇಜಿಗೆ ಹೋಗುತ್ತಿರುವಾಗ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಯುವತಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ ಎನ್ನಲಾಗಿದೆ.

ಪೂರ್ವ ಮಂಡಲ ಡಿಸಿಪಿ ಸಾಯಿಶ್ರೀ ಮಾತನಾಡಿ, ಅಂಬರಪೇಟೆಯ ತುರಬ್‌ನಗರದ ಬಾಲಕಿ ಮತ್ತು ಮೃತ ಹುಡುಗ ಒಂದೇ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಬಾಲಕಿಯ ತಾಯಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯದ ಕಾರಣ ಇತ್ತೀಚೆಗೆ ನಿಧನರಾಗಿದ್ದಾರೆ. ಟೈಲರಿಂಗ್ ಉಪಕರಣಗಳನ್ನು ಮೃತ ಬಾಲಕನ ಮನೆಯವರು ಖರೀದಿಸಿದ್ದಾರೆ ಎನ್ನಲಾಗಿದೆ.

ಬಾಲಕಿ ಗುರುವಾರ ಸಂಜೆ ತಮ್ಮ ದೊಡ್ಡಮ್ಮ ಮಗಳ ಬಳಿ ಟ್ಯೂಷನ್​ಗೆ ಹೋಗಿದ್ದಳು. ಇದನ್ನು ಗಮನಿಸಿದ ಬಾಲಕ ರಾತ್ರಿ 7.30ಕ್ಕೆ ಟ್ಯೂಷನ್‌ಗೆ ಹೋಗಿದ್ದ ಬಾಲಕಿಗೆ ಚಾಕುವಿನಿಂದ ಇರಿದಿದ್ದಾನೆ. ಇದನ್ನು ಪ್ರಶ್ನೆ ಮಾಡಿದ ಆಕೆಯ ದೊಡ್ಡಮ್ಮನ ಮಗಳನ್ನು ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಚಾಕು ಅಲ್ಲಿಯೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಕುರಿತು ಅಂಬರಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದಾದ ಬಳಿಕ ಬಾಲಕ ಚಲಿಸುವ ರೈಲಿಗೆ ಸಿಲುಕಿ ಗುರುವಾರ ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಎರಡು ಘಟನೆಗಳ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.